ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಆತನ ಕುಟುಂಬದವರು ಅರೆಸ್ಟ್‌

Mousin Shakur
Published on
 ಶಿರಸಿ: ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಬಂಧಿಸಲಾದ ಡಿಜೆ ಹಳ್ಳಿ ಗಲಭೆ ಪ್ರಕರಣದ ಕ್ರಿಮಿನಲ್ ಆರೋಪಿ, ನಿಷೇಧಿತ ಪಿಎಪ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಮೌಸೀನ್ ಇಮ್ತಿಯಾಜ್ ಅಬ್ದುಲ್ ಶುಕೂರ್ ನ್ನು ಪೊಲೀಸರು ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದಾರೆ.
 ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ನಗರದ ಮಾರುಕಟ್ಟೆ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರ ನೇತೃತ್ವದಲ್ಲಿ  ಮೊದಲು ಆರೋಪಿಯ ವೈದ್ಯಕೀಯ ಪರೀಕ್ಷೆ ನಡೆಸಿ, ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತಂದಿದ್ದಾರೆ.ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
 ಈ ಕುರಿತಂತೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಎಂ. ನಾರಾಯಣ,  ಕಳೆದ ಮೂರೂವರೆ ವರ್ಷಗಳ ಹಿಂದೆ ಶಿರಸಿಯ ಗಣೇಶ ನಗರದ ಅನೀಶ್ ತಹಸೀಲ್ದಾರ ಎಂಬಾತನ ಹಲ್ಲೆ ಯತ್ನ  ಹಾಗೂ ಅಸ್ಲಾಂ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತ ಮೌಸೀನ್ ಆರೋಪಿಯಾಗಿದ್ದಾನೆ.  ಈತ ವಾರೆಂಟ್ ಇದ್ದರೂ ಮೂರೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ತಂಡ ರಚಿಸಲಾಗಿತ್ತು. ಬಿಜಾಪುರ ಸಿಂದಗಿಯ ಮಾರಟಗಿಯಲ್ಲಿ ಈತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಆರೋಪಿ ಮೌಸಿನ್ ಶೂಕುರ ಈತ  ಬೆಂಗಳೂರಿನ ಕೆಜೆಹಳ್ಳಿ, ಡಿಜೆಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಘಟನೆಗೆ ಸಂಬಂಧಿಸಿ ೧೬ನೇ ಆರೋಪಿಯಾಗಿದ್ದಾನೆ. ಆ ಪ್ರಕರಣಕ್ಕೂ  ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸರು ಹುಡುಕಾಟದಲ್ಲಿದ್ದರು. ಈತ ಕೊಲೆ ಪ್ರಕರಣ, ಕೆಜೆಹಳ್ಳಿ, ಡಿಜೆಹಳ್ಳಿಯ ಗಲಭೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇರುವುದು ಗೊತ್ತಿದ್ದರೂ, ಈತನ ಮನೆ ಮೇಲೆ  ದಾಳಿ  ನಡೆಸಿದ ಎನ್ ಐ ಎ ತಂಡಕ್ಕೆ ಸಹಕರಿಸದೇ  ಕುಟುಂಬ ಸದಸ್ಯರು ಆರೋಪಿಗೆ ತಪ್ಪಿಸಿಕೊಳ್ಳಲು  ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಮೇಲೆ ಸಹ ಕೇಸ್ ದಾಖಲಿಸುತ್ತಿದ್ದೇವೆ. ಅದೇ ರೀತಿ ವಾರೆಂಟ್ ತಪ್ಪಿಸಿಕೊಂಡಿದ್ದ ಹಿನ್ನೆಲೆಯಲ್ಲೂ ಈತನ ಮೇಲೆ ಇನ್ನೊಂದು ಕೇಸ್ ದಾಖಲಿಸುತ್ತಿದ್ದೇವೆ ಎಂದರು.
 ಡಿವೈಎಸ್‌ಪಿ ಗಣೆಶ ಕೆ.ಎಲ್, ಸಿಪಿಐಗಳಾದ ಶಶಿಕಾಂತ ವರ್ಮಾ, ರಮೇಶ ಹಾನಾಪುರ ಹಾಗೂ ಸಿಬ್ಬಂದಿ ಇದ್ದರು.

ದಕ್ಷಿಣಕನ್ನಡದಲ್ಲಿ ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಮಸೂದ್ ಈತನ ಜೊತೆಗಾರ ಎಂಬ ಹಿನ್ನೆಲೆಯಲ್ಲಿ ಎನ್ ಐ ಎ ತಂಡ ಶೋಧ ನಡೆಸಿತ್ತು. ಈತ ಪಿಎಫ್‌ಐ ಸಂಘಟನೆಗೆ ಹೆಚ್ಚಿನ ಜನರನ್ನು ನಿಯೋಜನೆ ಮಾಡಿಕೊಂಡಿದ್ದ. ನಿಟ್ಟೂರ್‌ನ ತರಬೇತಿ ಕೇಂದ್ರದ ಮುಖ್ಯಸ್ಥನಾಗಿದ್ದ. ಎನ್‌ಐಎ ದಾಳಿ ಮಾಡಿದಾಗಲೂ ತಪ್ಪಿಸಿಕೊಂಡಿದ್ದ. ನಮ್ಮ ತಂಡ ಕರಾರುವಕ್ಕಾಗಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದೆ. - ಎಂ. ನಾರಾಯಣ, ಎಸ್ ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net