

ಮಂಡ್ಯ: ನಗರದ ನೂರಡಿ ರಸ್ತೆಯ ಜನನಿ ಇಂಡಿಯಲ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರೊಬ್ಬರು ಬೀಳಿಸಿಕೊಂಡು ಹೋಗಿದ್ದ ಬರೋಬರಿ ಒಂದು ಲಕ್ಷ ರೂ ಸಿಬ್ಬಂದಿಯ ಮಾನವೀಯತೆಯಿಂದ ವಾಪಸ್ ಸಿಗುವಂತಾಗಿದೆ.
ಮಂಡ್ಯ ನಗರದ ವಾಸಿ ನಾಗೇಶ್ ಎಂಬುವರು ಗುರುವಾರ ಕಾರಿಗೆ ಡೀಸೆಲ್ ಹಾಕಿಸಲು ಬಂದಾಗ ಅವಸರದಲ್ಲಿ ಒಂದು ಲಕ್ಷ ರೂ ಬೀಳಿಸಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿ ರವಿ ಕಾರಸವಾಡಿ ಎನ್ನುವವರಿಗೆ ಆ ಹಣ ಸಿಕ್ಕಿದೆ. ಆನಂತರ ಈ ವಿಚಾರವನ್ನು ಪೆಟ್ರೋಲ್ ಬಂಕ್ ಮಾಲೀಕರ ಭಕ್ತವತ್ಸಲ ಅವರಿಗೆ ತಿಳಿಸಿ ಹಣವನ್ನು ಕೊಟ್ಟಿದ್ದರು.
ಸಿಸಿ ಕ್ಯಾಮೆರಾ ಪರಿಶೀಲಿಸಿ ಹಣ ಕಳೆದುಕೊಂಡ ವ್ಯಕ್ತಿಯನ್ನು ಗುರುತಿಸಲಾಗಿದೆ. ಜತೆಗೆ ಹಲವರನ್ನು ವಿಚಾರಿಸಿ ನಾಗೇಶ್ ಅವರನ್ನು ಪತ್ತೆ ಮಾಡಲಾಗಿದೆ. ಬಳಿಕ ಶುಕ್ರವಾರ ಆತನನ್ನು ಬಂಕ್ ಕರೆಸಿ ಮತ್ತೊಮ್ಮೆ ಖಚಿತಪಡಿಸಿಕೊಂಡು ಹಲವು ಮುಖಂಡರ ಸಮ್ಮುಖದಲ್ಲಿ ಹಣವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆಯಲಾಯಿತು. ಈ ಹಿನ್ನೆಲೆಯಲ್ಲಿ ನಾಗೇಶ್ ಸಿಬ್ಬಂದಿ ರವಿಗೆ ಒಂದು ಸಾವಿರ ರೂ ಬಹುಮಾನ ನೀಡಿ ಪ್ರಶಂಸಿಸಿದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕ ಭಕ್ತವತ್ಸಲ, ಜನಸ್ಪಂದನಾ ಟ್ರಸ್ಟ್‌ನ ನಾಗರತ್ನ, ಹೇಮಾ, ಮೂರ್ತಿ, ರಘು ಇತರರಿದ್ದರು.