

ಹುಬ್ಬಳ್ಳಿ : ದಕ್ಷಿಣ ಭಾರತದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯವರು, ತಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿಯೇ ಪೆಟ್ರೋಲ್, ಡೀಸೆಲ್ ಬೆಲೆ ಕರ್ನಾಟಕಕ್ಕಿಂತಲೂ ಹೆಚ್ಚಿಗೆ ಇದೆ ಎಂಬ ಕನಿಷ್ಠ ಜ್ಞಾನ ಹೊಂದಿಲ್ಲ ಎಂಬುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರದ ಮಧ್ಯಪ್ರದೇಶದಲ್ಲಿ 108.20 ರೂ., ಮಹಾರಾಷ್ಟ್ರದಲ್ಲಿ 104.66 ರೂ., ರಾಜಸ್ಥಾನದಲ್ಲಿ 104.86 ರೂ. ಸೇರಿದಂತೆ ದಕ್ಷಿಣ ಭಾರತದ ಕೇರಳದಲ್ಲಿ 106.66 ರೂ., ತೆಲಂಗಾಣದಲ್ಲಿ 107.40 ರೂ. ಹಾಗೂ ಆಂಧ್ರಪ್ರದೇಶದಲ್ಲಿ 109.44ರೂ.ಗೆ ಪೆಟ್ರೋಲ್ ದೊರೆಯುತ್ತದೆ. ಆದರೆ, ಕರ್ನಾಟಕದಲ್ಲಿ 102.86ರೂ.ಗೆ ಪೆಟ್ರೋಲ್ ದೊರೆಯುತ್ತಿದ್ದು, ಕನಿಷ್ಠ ಸಾಮಾನ್ಯ ಜ್ಞಾನ ಹೊಂದಿರದ ಬಿಜೆಪಿಗರು ಪ್ರತಿಭಟನೆ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಕೇಂದ್ರ ಬಿಜೆಪಿ ಸರ್ಕಾರವು ಒಂದು ಹಂತದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.21 ರೂ. ದಿಂದ 32.98 ರೂ.ಗೆ ಹಾಗೂ ಡೀಸೆಲ್ ಮೇಲೆ 3.45 ರೂ. ದಿಂದ 31.84 ರೂ. ಕ್ಕೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ ಎಂದು ದೂರಿದ್ದಾರೆ.
ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ 19.9 ರೂ. ಹಾಗೂ ಡೀಸೆಲ್ ಮೇಲೆ 15.8 ರೂ. ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆ ಇಳಿಕೆ ಮಾಡಬೇಕು. ಆ ನಿಟ್ಟಿನಲ್ಲಿ ಬಿಜೆಪಿಯವರು ಕೇಂದ್ರ ಸರ್ಕಾರ ತೆರಿಗೆ ಇಳಿಸಲು ಹೋರಾಟ ಮಾಡಬೇಕು ಎಂದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದ್ದಾರೆ.