ವಾಹನ ಸವಾರರೇ ಎಚ್ಚರ! 110 ರೂ.ಗೆ ಬಂದಿದ್ದು 300 mL ಪೆಟ್ರೋಲ್​ ಮಾತ್ರ, ಬಂಕ್​ ವಂಚನೆ ಬಯಲು

Bike Rider
Published on

ತುಮಕೂರು: ಪೆಟ್ರೋಲ್​ ಮತ್ತು ಡೀಸೆಲ್​ ನಮ್ಮ ಜೀವನದ ಅತ್ಯಗತ್ಯ ವಸ್ತುಗಳಾಗಿವೆ. ಇಂಧನಗಳು ಇಲ್ಲದಿದ್ದರೆ ಇಡೀ ಜಗತ್ತೇ ಸ್ತಬ್ಧವಾಗಿಬಿಡುತ್ತದೆ. ಇಡೀ ವಿಶ್ವದ ಚಲನೆಯು ಇಂದು ಇಂಧನದ ಮೇಲೆ ಅವಲಂಬಿತವಾಗಿದೆ. ನೀರಿನಷ್ಟೇ ಇಂಧನವು ಮುಖ್ಯವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಗ್ರಾಹಕರ ಬಳಿ ಸುಲಿಗೆ ಮಾಡುತ್ತಿದ್ದಾರೆ.

ಹೌದು, ತುಮಕೂರಿನಲ್ಲಿ ಕೆಲ ಪೆಟ್ರೋಲ್ ಬಂಕ್​ಗಳಿಂದ ವಂಚನೆ ಹೆಚ್ಚಾಗಿದೆ. ಬೈಕ್​ ಸವಾರನೊಬ್ಬ 110 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡರೆ, ಬಂದಿದ್ದು ಮಾತ್ರ 300 ಎಂ.ಎಲ್​. ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಎಚ್​ಪಿ ಪೆಟ್ರೋಲ್ ಬಂಕ್​ನಲ್ಲಿ ಈ ಘಟನೆ ನಡೆದಿದೆ.

110 ರೂಪಾಯಿಗೆ ಪವರ್ ಪೆಟ್ರೋಲ್ ಹಾಕಿ ಅಂತ ಬೈಕ್​ ಸವಾರ ಕೇಳಿದ್ದಾನೆ. ಬಳಿಕ ಬಂಕ್​ ಸಿಬ್ಬಂದಿ ಪೆಟ್ರೋಲ್​ ಹಾಕಿದ ಕೂಡಲೇ ಬೈಕ್​ ಸವಾರ ಅದನ್ನು ಪರಿಶೀಲನೆ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ. 110 ರೂಪಾಯಿಗೆ ಒಂದು ಲೀಟರ್​ಗೂ ಅಧಿಕ ಪೆಟ್ರೋಲ್​ ಹಾಕಬೇಕು. ಆದರೆ, 300 ಎಂ.ಎಲ್​. ಪೆಟ್ರೋಲ್​ ಹಾಕಿ ವಂಚನೆ ಮಾಡಿದ್ದಾರೆ.

ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ ಎಚ್​ಪಿ ಪೆಟ್ರೋಲ್ ಬಂಕ್​‌ನಲ್ಲಿ ಈ ಘಟನೆ ನಡೆದಿದೆ. ಇದೇ ರೀತಿ ಸಾಕಷ್ಟು ಬೈಕ್ ಸವಾರರಿಗೆ ಈ ಪೆಟ್ರೋಲ್​ ಬಂಕ್​ ವಂಚನೆ ಮಾಡಿರುವ ಆರೋಪವೂ ಕೇಳಿಬಂದಿದೆ.

ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂದೆ ಅತಿಯಾಗುತ್ತಿದೆ. ಪೆಟ್ರೋಲ್ ದರ ಹೆಚ್ಚಾಗುತ್ತಿರುವ ಆತಂಕ ಒಂದು ಕಡೆಯಾದರೆ, ಮತ್ತೊಂದು ಕಡೆ ಬಂಕ್ ಮಾಲೀಕರಿಂದ ವಾಹನ ಸವಾರರ ಸುಲಿಗೆ ಎಗ್ಗಿಲ್ಲದೇ ನಡೆಯುತ್ತಿದೆ. ಕಳೆದ ವಾರವಷ್ಟೇ‌ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಇದೇ ರೀತಿ ದಂದೆ ಬಯಲಾಗಿತ್ತು. ಈ ವೇಳೆ ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net