ಪ್ರತಿರೋಧದ ನಡುವೆ ಸರ್ಕಾರಿ ಗುಂಡು ತೋಪಿನಲ್ಲಿದ್ದ ಪೆಟ್ರೋಲ್ ಬಂಕ್ ತೆರವು

30-klr-3
Published on

ಕೋಲಾರ :ನಗರದ ಸಂಚಾರಿ ಠಾಣೆ ಬಳಿ ಸರ್ಕಾರಿ ಜಾಗದಲ್ಲಿದ್ದ ಪೆಟ್ರೋಲ್ ಬಂಕ್‌ನ್ನು ಪ್ರತಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್‌ನಲ್ಲಿ ಶನಿವಾರ ತೆರವು ಮಾಡಲಾಯಿತು.

ಠಾಣೆ ಪಕ್ಕದಲ್ಲೇ ಸತೀಶ್ ಎಂಬುವವರ ಸೆವೆನ್ ಹಿಲ್ಸ್ ಸರ್ವೀಸ್ ಸ್ಟೇಷನ್ (ಐಒಸಿ) ಪೆಟ್ರೋಲ್ ಬಂಕ್ ಇದೆ. ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಇದು ಸರ್ಕಾರಿ ಗುಂಡುತೋಪು. ಈ ಸಂಬಂಧ ತೆರವು ಮಾಡಲು ಮಾಲೀಕರಿಗೆ ಜಿಲ್ಲಾಧಿಕಾರಿಗಳಿಂದ ನೋಟಿಸ್ ಜಾರಿಯಾಗಿತ್ತಾದರೂ ಕ್ರಮ ವಹಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಎಸಿ ಸೋಮಶೇಖರ್ ಹಾಗೂ ತಹಸೀಲ್ದಾರ್ ಶೋಭಿತಾ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆೆಗೆ ಕಾರ್ಯಾಚರಣೆ ಆರಂಭಿಸಲಾಯಿತು. ಬಂಕ್‌ನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಸುತ್ತಲೂ ಕಾಲುವೆ ತೋಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಾಲೀಕ ಸತೀಶ್ ಪ್ರತಿರೋಧ ವ್ಯಕ್ತಪಡಿಸಿದರಲ್ಲದೆ ಬಂಕ್ ನಿರ್ಮಿಸುವಾಗ 2005 ಮತ್ತು 2010ರಲ್ಲಿ ಜಿಲ್ಲಾಧಿಕಾರಿ, ಅಗ್ನಿಶಾಮಕದಳ, ನಗರಸಭೆ, ಪಿಡಬ್ಲ್ಯುಡಿ, ಕುಡಾ, ತಹಸೀಲ್ದಾರ್, ಪೊಲೀಸ್ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದಿದ್ದೇನೆ. ಆಗ ಯಾವುದೇ ತಕರಾರು ಇರಲಿಲ್ಲ, ಈಗ ಏಕೆಂದು ಪ್ರಶ್ನಿಸಿದರು.

1948ರಿಂದ ನಗರಸಭೆಯಲ್ಲಿ ಖಾತೆ ಆಗಿದೆ, ಭಜನೆ ಸೀನಪ್ಪ ಎಂಬುವವರಿಂದ ಮಕ್ಕಳಿಗೆ ಬಂದಿದ್ದ ಈ ಜಾಗವನ್ನು ಬೇರೆಯವರು ಖರೀದಿಸಿದ್ದರು. ಇವರಿಂದ ನನ್ನ ತಂದೆ ಖರೀದಿಸಿದ್ದರು. ಅದು ನನಗೆ ಬಂದಿದೆ. ಸೂಕ್ತ ದಾಖಲೆಗಳಿವೆ ಎಂದು ವಾದಿಸಿದಾಗ ಮಾತಿನ ಚಕಮಕಿ ನಡೆಯಿತು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ನಗರಸಭೆ ಹಾಲಿ ಹಾಗೂ ಮಾಜಿ ಸದಸ್ಯರು, ಮುಖಂಡರು, ಪ್ರಭಾವಿಗಳು ದೌಡಾಯಿಸಿ ಬಂಕ್ ಮಾಲೀಕರ ಪರ ವಕಾಲತ್ತು ವಹಿಸಿದರಲ್ಲದೆ ದಾಖಲೆ ಪರಿಶೀಲಿಸಿ, ಕಾಲಾವಕಾಶ ನೀಡಬೇಕು, ಏಕಾಏಕಿ ತೆರವುಗೊಳಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರಿ ಜಾಗ ತೆರವಿಗೆ ಬದ್ಧರಾಗಿದ್ದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದರು. ಈ ಮಧ್ಯೆ ಐಒಸಿ ಜಿಲ್ಲಾ ಸಹಾಯಕ ವ್ಯವಸ್ಥಾಪಕ (ರಿಟೇಲ್) ಶ್ರೀನಿವಾಸ್ ಬಂಕ್ ತೆರವು ಕಾರ್ಯ ಅತ್ಯಂತ ಸೂಕ್ಷ್ಮವಾಗಿದೆ. 4 ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳಿವೆ, ಇದನ್ನು ತೆರವುಗೊಳಿಸಲು ಬೆಂಗಳೂರಿನಿಂದ ತಂತ್ರಜ್ಞರು ಬರಬೇಕಿರುವುದರಿಂದ ಕಾಲಾವಕಾಶ ಕೋರಿದರು. ಸಮ್ಮತಿಸಿದ ಅಧಿಕಾರಿಗಳು ತಜ್ಞರು ಬಂದ ನಂತರ ಕಾರ್ಯಾಚರಣೆ ಮುಂದುವರಿಸಲು ತೀರ್ಮಾನಿಸಿದರು.

ಟೇಕಲ್ ರಸ್ತೆ ಬಳಿ ಸ.ನಂ.149/2ರಲ್ಲಿ 34 ಗುಂಟೆ ಸರ್ಕಾರಿ ಗುಂಡುತೋಪು ಇದೆ. ಅದರಲ್ಲಿ 10 ಗುಂಟೆ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿದ್ದರು. ತೆರವಿಗೆ ನೋಟಿಸ್ ನೀಡಲಾಗಿತ್ತಾದರೂ ಖಾಲಿ ಮಾಡಿರಲಿಲ್ಲ. ಜಿಲ್ಲಾಧಿಕಾರಿ ನಿರ್ದೇಶನದಂತೆ ತೆರವುಗೊಳಿಸಲಾಗಿದೆ. ನಮ್ಮ ದಾಖಲೆ ಪ್ರಕಾರ ಗುಂಡುತೋಪು. ಸರ್ಕಾರಿ ಉಪಯೋಗಕ್ಕೆ, ಸಾರ್ವಜನಿಕ ಬಳಕೆಗೆ ಹೊರತುಪಡಿಸಿ ಪರಭಾರೆಗೆ ಅವಕಾಶ ಇಲ್ಲ. ನಗರಸಭೆ ಖಾತೆ ಮಾಡಿದ್ದರೆ ತಪ್ಪು, ದಾಖಲೆ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ. ಸೋಮಶೇಖರ್, ಉಪವಿಭಾಗಾಧಿಕಾರಿ, ಕೋಲಾರ ನಮ್ಮ ತಂದೆ ಖರೀದಿಸಿದ ಜಾಗ ಇದು. 72 ವರ್ಷಗಳಿಂದ ಇದೆ. ಬಂಕ್ ಸ್ಥಾಪನೆಗೆ ಸಂಬಂಧಪಟ್ಟ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿದ್ದೇನೆ. ಜಾಗದ ದಾಖಲೆ ನೀಡಿದ್ದೇನೆ. ಈಗ ಸರ್ಕಾರಿ ಗುಂಡುತೋಪು ಎಂದು ತೆರವುಗೊಳಿಸುತ್ತಿರುವುದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಸತೀಶ್, ಬಂಕ್ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net