

ಬೆಳಗಾವಿ: ನಗರದ ಪ್ರಕಾಶ ಚಿತ್ರಮಂದಿರದ ಆವರಣದಲ್ಲಿ ನಡೆದ ಪೆಟ್ರೋಲ್ ಬಾಂಬ್ ಪ್ರಕರಣಕ್ಕೆ ಇಂದಿಗೆ 2 ವರ್ಷ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸಿರುವ ಬೆಳಗಾವಿ ಪೊಲೀಸರು ಮತ್ತೋರ್ವ ಪ್ರಮುಖ ಹೃಷಿಕೇಶ ಅಲಿಯಾಸ್ ಮುರಳಿಯನ್ನು ತನಿಖೆಗೊಳಪಡಿಸಿ ಮತ್ತಷ್ಟು ಮಾಹಿತಿ ಪಡೆಯಲು ಸನ್ನದ್ಧರಾಗಿದ್ದಾರೆ.
ಈಗಾಗಲೇ ನ್ಯಾಯಾಲಯ ಎರಡು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ಗೌರಿ ಲಂಕೇಶ ಹತ್ಯೆ ಪ್ರಕರಣದ ತನಿಖೆಗಾಗಿ ಜ. 27ರ ವರೆಗೆ (15 ದಿನ) ಶಂಕಿತ ಹೃಷಿಕೇಶ ದೇವಡೇಕರ್‌ನನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಅವರ ತನಿಖೆ ಮುಗಿಯುತ್ತಿದ್ದಂತೆ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ದಿನ ಬಾಡಿ ವಾರೆಂಟ್ ಪಡೆದು, ಆ ನಂತರ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಿದ್ದೇವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ದೋಷಾರೋಪ ಪಟ್ಟಿಯಲ್ಲಿ ವ್ಯತ್ಯಾಸ: ಕೃತ್ಯ ನಡೆದಾಗಿನಿಂದ ಈವರೆಗಿನ 2 ವರ್ಷದ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ವಶಕ್ಕೆ ಪಡೆದು ಎರಡು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿವೆ. ಆದರೆ, ಮೊದಲ ಪಟ್ಟಿಯಲ್ಲಿ ದೋಷಿ ಎಂದು ಉಲ್ಲೇಖಿಸಲಾಗಿದ್ದ ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮದ ಸಂಭಾಜಿ ಮಾರುತಿ ಪಾಟೀಲ, ಪ್ರತೀಕ ಅಲಿಯಾಸ್ ಪಂಡೀತ ಪ್ರಕಾಶ ಓಗಳೆ ಮತ್ತು ಸಂತೋಷ ತುಳಜಪ್ಪ ಗುರವ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ ಎಂದು ತನಿಖಾಧಿಕಾರಿಗಳು 390 ಪುಟಗಳ ಎರಡನೇ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಮಹಾರಾಷ್ಟ್ರದ ಸುಧನ್ವ ಗೊಂದಳೇಕರ್, ಶರತ್ ಕಲಸ್ಕಾರ್, ಬೆಳಗಾವಿಯ ನಿವಾಸಿ ಭರತ್ ಕುರ್ಣೆ, ಕಲಕಂಬಾದ ಲಕ್ಷ್ಮೀಗಲ್ಲಿ ನಿವಾಸಿ ಸುನೀಲ ಮಾರುತಿ ಪಾಟೀಲ, ಶಹಾಪುರದ ಪ್ರವೀಣ ಚತುರ ಹಾಗೂ ದಾಮಣೆಯ ಬಸವನಗಲ್ಲಿಯ ಗಣೇಶ ಪರಶುರಾಮ ರೇಮಾನಾಚೆ ಹಾಗೂ ಹಲಗಾಬಸ್ತವಾಡ ಗ್ರಾಮದ ನೇತಾಜಿಗಲ್ಲಿ ನಿವಾಸಿ ಪರಶುರಾಮ ಕೃಷ್ಣ ಕಾಕತ್ಕರ್ ಹಾಗೂ ಹೃಷಿಕೇಶ ದೇವಡೇಕರ್ ಸೇರ್ಪಡೆಗೊಳಿಸಿದ್ದರು. ಈ ಎರಡು ದೋಷಾರೋಪ ಪಟ್ಟಿಗಳ ನಡುವಿನ ವ್ಯತ್ಯಾಸ ಹಾಗೂ ಸತ್ಯಾಸತ್ಯತೆ ತಿಳಿಯಬೇಕಾದರೆ ಹೃಷಿಕೇಶನನ್ನು ತನಿಖೆಗೆಗೊಳಪಡಿಸುವುದು ಅತ್ಯಗತ್ಯವಾಗಿದೆ.
ಕೃತ್ಯಕ್ಕೆ ಸಿದ್ಧವಾಗಿತ್ತು ನೀಲಿನಕ್ಷೆ : ಪತ್ರಕರ್ತೆ ಗೌರಿ ಲಂಕೇಶ ಹಾಗೂ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳೇ ಈ ಕೃತ್ಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಾಂಬ್ ಹಾಕಲು ತೆರಳುವ ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವ ಬಗ್ಗೆ ಪರಶುರಾಮ ಕಾಕತ್ಕರ್ ಮ್ಯಾಪ್ ಹಾಗೂ ಸುಧನ್ವ ಗೋಂಧಳೇಕರ್ ಪೆಟ್ರೋಲ್ ಬಾಂಬ್ ತಯಾರಿಸಿ ಶರದ್ ಕಳಾಸ್ಕರ್ ಮೂಲಕ ಹೃಷಿಕೇಶನಿಗೆ ತಲುಪಿಸಿ, ಆತ ಪ್ರವೀಣ ಚತುರಗೆ ನೀಡಿದ್ದಾನೆ. ನಂತರ ಕೆಎ 22/ಇಜೆ-0449 ಸಂಖ್ಯೆಯ ಬೈಕ್‌ನ ನಂಬರ್ ಪ್ಲೇಟ್ ಬದಲಾಯಿಸಿ ತಂದ ಅಪ್ಪುಣಿ ಗಣೇಶ ರೇಮಾನಾಚೆಯ ಬೈಕ್ ಮೇಲೆ ತೆರಳಿ ಪ್ರವೀಣ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ ಎಂಬ ಮಾಹಿತಿ ಇಲ್ಲಿನ ಮೂರನೇ ಜೆಎಂಎಪ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ 2ನೇ ದೋಷಾರೋಪ ಪಟ್ಟಿಯಲ್ಲಿದೆ.
ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿ ಮಸಾಲಾವಾಲಾ ಅಲಿಯಾಸ್ ಪ್ರವೀಣ ಚತುರ ನಗರದ ಪ್ರಕಾಶ ಚಿತ್ರಮಂದಿರದಲ್ಲಿ ಪೆಟ್ರೋಲ್ ಬಾಂಬ್ ಎಸೆದಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಸಂಚು ರೂಪಿಸಿ ಮಾರ್ಗದರ್ಶನ ಮಾಡಿದ್ದ ಎನ್ನಲಾದ ಪ್ರಮುಖ ಆರೋಪಿ ಶಿವಾ ಅಲಿಯಾಸ್ ಹೃಷಿಕೇಶ (ಮುರಳಿ, ಕಿಶೋರ್) ತನಿಖೆ ನಡೆಸಲು ಸಿದ್ಧತೆ ನಡೆದಿದೆ.
ವಿಚಾರವಾದಿಗಳ ಹತ್ಯೆ ಪ್ರಕರಣದ ಆರೋಪಿಗಳು ಮೊದಲ ಬಾರಿಗೆ ಪದ್ಮಾವತ್ ಚಿತ್ರ ಪ್ರದರ್ಶನ ತಡೆಗಟ್ಟಲು ಪುಣೆಯಲ್ಲಿ ಸಂಚು ರೂಪಿಸಿದ್ದರು. ಪುಣೆ, ಮುಂಬೈ ಹಾಗೂ ಕೊಲ್ಲಾಪುರ ಸೇರಿದಂತೆ ಬೆಳಗಾವಿಯಲ್ಲಿ ಪೆಟ್ರೋಲ್ ಬಾಂಬ್ ಎಸೆಯುವ ಬಗ್ಗೆ ಚರ್ಚಿಸಿದ್ದರು. ಆನಂತರ ಆಯಾ ಸ್ಥಳಗಳಲ್ಲಿ ಸಹಾಯಕ್ಕಾಗಿ ಸ್ಥಳೀಯರನ್ನು ಬಳಸಿಕೊಳ್ಳಲೂ ತೀರ್ಮಾನಿಸಿದ್ದರು. ಹೀಗಾಗಿ ಸ್ಥಳೀಯರನ್ನು ಸೇರಿಸಿಕೊಂಡು ನಗರದ ಶಿವಾಜಿ ಉದ್ಯಾನದಲ್ಲಿ ಕೃತ್ಯಕ್ಕಾಗಿ ಯುವಕರನ್ನು ಆಯ್ಕೆ ಮಾಡಿ ಯೋಜನೆ ರೂಪಿಸಿದ್ದರು. ಬಾಂಬ್ ಎಸೆಯುವುದನ್ನು ಉದ್ಯಾನದಲ್ಲಿಯೇ ಕಲ್ಲೆಸೆದು ಪ್ರಾೃಕ್ಟೀಸ್ ಮಾಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.