ತೈಲ ಬೆಲೆ ಹಚ್ಚಳ ವಿರೋಧಿಸಿ ಬಿಜೆಪಿ ಶಾಸಕ, ಜಿಲ್ಲಾಧ್ಯಕ್ಷರ ಸೈಕಲ್​ ಸವಾರಿ

JyothiGanesh_Cycle
Published on

ತುಮಕೂರು: ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ಜಟಕಾ ಗಾಡಿಗೆ ದ್ವಿಚಕ್ರ ವಾಹನ ಕಟ್ಟಿ, ಸೈಕಲ್​ ಸವಾರಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಭದ್ರಮ್ಮ ವೃತ್ತದ ಜಿಲ್ಲಾ ಬಿಜೆಪಿ ಕಚೇರಿಯಿಂದ ಬಿಜಿಎಸ್​ ವೃತ್ತದವರೆಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಸೈಕಲ್​ ತುಳಿಯುವ ಮೂಲಕ ತೈಲ ಬೆಲೆ ಹೆಚ್ಚಳಕ್ಕೆ ಆಕ್ರೋಶ ಹೊರಹಾಕಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನಗರ ಶಾಸಕ ಬಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಮಾಡಿ ರಾಜ್ಯದ ಜನರಿಗೆ ಮಕ್ಮಲ್​ ಟೋಪಿ ಹಾಕುತ್ತಿದೆ. ತೈಲ ಬೆಲೆ ಏರಿಕೆಯಿಂದ ದಿನಬಳಕೆ ಪದಾರ್ಥಗಳ ಬೆಲೆ, ಬಸ್​, ಆಟೋಗಳ ಪ್ರಯಾಣ ದರ ಹೆಚ್ಚಾಗಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುತ್ತದೆ ಎಂದರು.

ಕಾಂಗ್ರೆಸ್​ ಸರ್ಕಾರದಲ್ಲಿ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಒಂದು ಅಡಿ ರಸ್ತೆ ಮಾಡಲೂ ಅನುದಾನವಿಲ್ಲ, ನಮ್ಮ ಬಿಜೆಪಿ ಸರ್ಕಾರದಲ್ಲಿ ನೀಡಿದ್ದ ಹಣದಲ್ಲಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವಂತಹ ಪರಿಸ್ಥಿತಿ ಬಂದಿದೆ. ತಮ್ಮ ವೈಫಲ್ಯ ಮರೆಮಾಚಲು ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಚಪಲ ಬೆಳೆಸಿಕೊಂಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಮಾತನಾಡಿ, ಇದು ಕೇವಲ ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳ ಮಾತ್ರವಿಲ್ಲ, ಈ ಏರಿಕೆಯಿಂದ ಎಲ್ಲಾ ಪದಾರ್ಥಗಳ ಬೆಚ್ಚಳವಾಗುತ್ತದೆ. ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಸರ್ಕಾರ ಮತ್ತಷ್ಟು ಹೊರೆ ಹೊರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದರು.

ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್​.ಹುಚ್ಚಯ್ಯ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ಸಿದ್ದರಾಮಯ್ಯ, ನಗರ ಬಿಜೆಪಿ ಅಧ್ಯಕ್ಷ ಟಿ.ಎಚ್​.ಹನುಮಂತರಾಜು, ಜಿಲ್ಲಾ ಉಪಾಧ್ಯಕ್ಷ ರವೀಶಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್​ಗೌಡ, ಗಂಗರಾಜು, ಹಾಲೇಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎಚ್​.ನವಚೇತನ್​ ಮತ್ತಿತರರು ನೇತೃತ್ವ ವಹಿಸಿದ್ದರು.

ಜನರಿಗೆ ಶುದ್ಧ ಕುಡಿಯುವ ನೀರು ನೀಡಲಾಗದ ಈ ಸರ್ಕಾರಕ್ಕೆ ರಾಜ್ಯದ ಜನರ ಹಿತ ಬೇಕಾಗಿಲ್ಲ, ಆಮಿಷಗಳ ಮೂಲಕ ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿದೆ. ಸರ್ಕಾರ ಈ ಕೂಡಲೇ ಏರಿಕೆಯಾಗಿರುವ ಪೆಟ್ರೋಲ್​, ಡೀಸೆಲ್​ ತೆರಿಗೆ ಇಳಿಸಬೇಕು. ಇಲ್ಲವಾದಲ್ಲಿ ಹೋಬಳಿ, ಮಂಡಲ ಮಟ್ಟದಲ್ಲೂ ಬಿಜೆಪಿ ಹೋರಾಟ ನಡೆಸಲಿದೆ. ಎಚ್​.ಎಸ್​.ರವಿಶಂಕರ್​ ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net