ಸಾರ್ವಜನಿಕ ಶೌಚಗೃಹ ನಿರ್ವಿುಸಲು ಮನವಿ

SGN MANAVI
Published on

ಶಿಗ್ಗಾಂವಿ: ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ವಿುಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕದಿಂದ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂತ್ರ ವಿಸರ್ಜನೆ ಹಾಗೂ ಶೌಚಕ್ಕೆ ಶೌಚಗೃಹಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಾರ್ವಜನಿಕ ಜನನಿಬಿಡ ಪ್ರದೇಶಗಳಲ್ಲಿ ಶೌಚಗೃಹಗಳನ್ನು ನಿರ್ವಿುಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಸಾರ್ವಜನಿಕ ಶೌಚಗೃಹಗಳಿಲ್ಲದೆ ಎಲ್ಲೆಂದರಲ್ಲಿ ಜನರು ಮೂತ್ರ ವಿಸರ್ಜಿಸುವಂತಾಗಿದೆ. ಇದರಿಂದ ಪಟ್ಟಣದ ಸೌಂದರ್ಯ ಹಾಳುತ್ತಿದೆ ಅಲ್ಲದೆ, ಸ್ವಚ್ಛತಾ ಕಾರ್ಯಕ್ಕೂ ಹಿನ್ನೆಡೆಯಾಗುತ್ತಿದೆ. ಹೀಗಾಗಿ ತ್ವರಿತಗತಿಯಲ್ಲಿ ಶೌಚಗೃಹಗಳನ್ನು ನಿರ್ವಿುಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಎದುರು ಕರವೇ ಸ್ವಾಭಿಮಾನಿ ಬಣದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ತಾಲೂಕಾಧ್ಯಕ್ಷ ಬಸವರಾಜ ಹುರಳಿ, ಶಂಭುಲಿಂಗಪ್ಪ ಕೆರಿ, ರವಿ ಕಡಕೋಳ, ರೂಪಾ ಬಂಗಿ, ಸಿದ್ದನಗೌಡ ಪಾಟೀಲ, ಶಿವು ನಾಗನೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net