ಆನ್‌ಲೈನ್ ನೋಂದಣಿ ನಿಷೇಧಿಸಲು ಮನವಿ

13 ckm 12
ಪ್ರವಾಸಿ ತಾಣಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯ ಮಾಡಿರುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ಗೆ ಮನವಿ ಸಲ್ಲಿಸಿದರು. ಭರತ್, ಅತ್ತಿಗುಂಡಿ ಪ್ರದೀಪ್, ನಾಗರಾಜ್, ಮುನ್ನ, ಶಾದಬ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯ ಪರ್ವತ ಶ್ರೇಣಿಗಳ ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ಆನ್‌ಲೈನ್ ನೋಂದಣಿ ಕಡ್ಡಾಯವನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಕೆ.ಭರತ್ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ವರ್ಷಕ್ಕೆ ಲಕ್ಷಗಟ್ಟಲೇ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಸ್ಥಳೀಯ ವ್ಯಾಪಾರ, ಹೋಟೆಲ್, ವಸತಿ ಗೃಹಗಳು ಸೇರಿದಂತೆ ಇನ್ನಿತರ ವಹಿವಾಟು ವೃದ್ಧಿಯಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಜೀವನ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಈ ವೇಳೆ ಆನ್‌ಲೈನ್ ವ್ಯವಸ್ಥೆ ಮುಖಾಂತರ ಕೇವಲ 600 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಿದರೆ ದಿನನಿತ್ಯದ ವ್ಯಾಪಾರ ನಡೆಸುತ್ತಿರುವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.
ಉಳಿದ ಪ್ರವಾಸಿಗರಿಗೆ ಮತ್ತೊಂದು ದಿನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಪ್ರಕಟಿಸಿರುವುದು ಹಲವಾರು ಗೊಂದಲ ಮೂಡಿಸಿದೆ. ಲಕ್ಷಾಂತರ ಪ್ರವಾಸಿಗರು ಇಂದಿಗೂ ಕೂಡಾ ಮೊದಲಿನಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಗಮಿಸುವ ಸಂಖ್ಯೆ ಹೆಚ್ಚಳವಾಗಿದೆ ಎಂದರು.
ಪ್ರವಾಸಿಗರನ್ನು ತಡೆದು ನಿಲ್ಲಿಸಿ ನೀವು ಆನ್‌ಲೈನ್ ಮುಖಾಂತರ ನೋಂದಾವಣೆ ಮಾಡಿಸದಿರುವ ಕಾರಣ ತಮಗೆ ಅವಕಾಶ ನೀಡುವುದಿಲ್ಲವೆಂದು ಪ್ರವಾಸದಿಂದ ನಿರ್ಗಮಿಸುವಂತೆ ಕಳುಹಿಸುತ್ತಿರುವುದರಿಂದ ಜಿಲ್ಲೆ ಒಂದು ರೀತಿ ಮುಜುಗರಕ್ಕೆ ಒಳಗಾಗಿದ್ದು, ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಇದರಿಂದ ಜಿಲ್ಲೆಗೆ ಆರ್ಥಿಕವಾಗಿ ಬಹಳಷ್ಟು ಹಿನ್ನೆಡೆಯಾಗುತ್ತಿದೆ. ಈ ಕಾನೂನು ಸಂಘರ್ಷಗಳು ಜಿಲ್ಲೆ ಹೆಸರಿಗೆ ಕಪ್ಪುಚುಕ್ಕೆಯಾಗಿದೆ. ಹೀಗಾಗಿ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಹೀಗಾಗಿ ಪ್ರವಾಸಿಗರು ಹಾಗೂ ಪರಿಸರಕ್ಕೆ ತೊಂದರೆಯಾಗದಂತೆ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಅತ್ತಿಗುಂಡಿ ಪ್ರದೀಪ್, ನಾಗರಾಜ್, ಮುನ್ನ, ಶಾದಬ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net