ಸಮರ್ಪಕ ಬಸ್ ಸೌಕರ್ಯ ಕಲ್ಪಿಸಿ

04- LXR
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಪಿಎಸ್‌ಐ ಯೂಸೆಪ್ ಜಮೂಲಾ ಅವರಿಗೆ ಮನವಿ ಸಲ್ಲಿಸಿದರು. ರಮೇಶ ಲಮಾಣಿ, ಇತರರಿದ್ದರು.
Published on

ಲಕ್ಷ್ಮೇಶ್ವರ: ಶಾಲಾ- ಕಾಲೇಜು ಸಮಯಕ್ಕೆ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ತಾಲೂಕಿನ ಹರದಗಟ್ಟಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಪಟ್ಟಣದ ಪೊಲೀಸರಿಗೆ ಮನವಿ ಸಲ್ಲಿಸಿದರು.

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಗ್ರಾಮಕ್ಕೆ ಸಮರ್ಪಕವಾಗಿ ಬಸ್‌ನ ವ್ಯವಸ್ಥೆಯಿಲ್ಲ. ಸಮಯಕ್ಕೆ ಶಾಲಾ- ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಮಂಗಳವಾರ ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗಿದೆ. ಆದರೆ, ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪಿಎಸ್‌ಐ ಯೂಸೆಫ್ ಜಮೂಲಾ ಅವರಿಗೆ ಮನವಿ ಮಾಡಿದರು.

ಗ್ರಾಮಸ್ಥ ರಮೇಶ ಲಮಾಣಿ ಮಾತನಾಡಿ, ಸಾರಿಗೆ ಸಮಸ್ಯೆ ಇಂದು, ನಿನ್ನೆಯದಲ್ಲ. ಈ ಸಮಸ್ಯೆ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಶಾಲೆ, ಕಾಲೇಜ್ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಸೇರಿ ರಸ್ತೆತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿಎಸ್‌ಐ ಯೂಸೆಪ್ ಜಮೂಲಾ ಮಾತನಾಡಿ, ಸಾರಿಗೆ ಘಟಕದ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net