

ಮಂಡ್ಯ: ಸರ್ಕಾರದ ಆದೇಶದಂತೆ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಿ ಬಸವ ಜಯಂತಿ ಆಚರಿಸಬೇಕೆಂದು ಆಗ್ರಹಿಸಿ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಮನವಿ ಸ್ವೀಕರಿಸಿದರು.
ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತವಾಗಿರಿಸದೆ, ಅವರ ಜಯಂತಿಯನ್ನು ಜಾತ್ಯಾತೀತವಾಗಿ ಆಚರಣೆ ಮಾಡಬೇಕು. ಜಾತಿ ವ್ಯವಸ್ಥೆ ಹಾಗೂ ಮೌಢ್ಯಾಚರಣೆಯ ವಿರುದ್ಧ ಸಾಮಾಜಿಕ ಕ್ರಾಂತಿ ನಡೆಸಿದ ಮಹಾಮಾನವತಾವಾದಿ. ಸರ್ಕಾರ ಬಸವಪ್ರಜ್ಞೆ ನಾಡಿನಾದ್ಯಂತ ಹರಡಬೇಕೆಂದು ಅನುಭವಮಂಪಟ ರಥಯಾತ್ರೆಯನ್ನು ನಡೆಸುತ್ತಿರುವುದು ಶ್ಲಾಘನೀಯ. ಬಸವಣ್ಣನವರ ಪುತ್ಥಳಿಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದುವರೆಗೂ ಈಡೇರಿಲ್ಲ. ಈ ಬಗ್ಗೆ ಉನ್ನತಮಟ್ಟದ ಸಭೆ ನಡೆಸಿ ಅನುಮತಿ ಪಡೆದು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಹಾಸಭಾದ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಕಾರ‌್ಯದರ್ಶಿ ನಿಜಗುಣ, ಮಹಂತಪ್ಪ, ಸುಂಡಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಶಿವರುದ್ರ, ಸಿದ್ದಶೆಟ್ಟಿ ಇತರರಿದ್ದರು.