

ಮಂಡ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯ ಎಂಎಸ್‌ಪಿಪಿಸಿ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಡಿಸಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಮಹಿಳೆಯರಿಗೆ ನೀಡಲಾಗುವ ಪೂರಕ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದಂತೆ ತಯಾರಿಕಾ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳಿಗಾಗಿ ಸರಬರಾಜಾಗಿರುವ ಅಕ್ಕಿ ಮತ್ತು ಗೋಧಿಯಲ್ಲಿ ಅವ್ಯವಹಾರ ನಡೆದಿದೆ. ಅಧಿಕಾರಿ ಮತ್ತು ಸರಬರಾಜುದಾರರು ಸೇರಿ ಮಾಡಿರುತ್ತಾರೆ ಎಂಬುವ ಅನುಮಾನವಿದೆ. ಮಾತ್ರವಲ್ಲದೆ ಗುಣಮಟ್ಟದ ಆಹಾರ ಪದಾರ್ಥ ಸರಬರಾಜು ಮಾಡುತ್ತಿಲ್ಲವೆನ್ನುವುದಿದೆ ಎಂದು ಆರೋಪಿಸಿದರು.
ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಿ, ಪ್ಯಾಕೆಟ್ ಮಾಡಿ ಸರಬರಾಜು ಮಾಡುತ್ತಿಲ್ಲ. ತೂಕದ ಪ್ರಮಾಣವು ಸರ್ಕಾರ ನಿಗದಿಪಡಿಸಿದಂತೆ ಇರುತ್ತಿಲ್ಲ. ಈ ವಿಚಾರವಾಗಿ ಮಳವಳ್ಳಿ ತಾಲೂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಇಲಾಖೆ ಉಪನಿರ್ದೇಶಕರನ್ನು ಭೇಟಿ ಮಾಡಿ ದಾಖಲೆ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ತುರ್ತು ತನಿಖೆಗೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಮಿತಿ ಸದಸ್ಯ ಮ.ಸೋ.ಚಿದಂಬರ್, ಜಿಲ್ಲಾಧ್ಯಕ್ಷ ಡಿ.ವೇಣು, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಸ್ವಾಮಿ, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ಇತರರಿದ್ದರು