ಗಗನಚುಕ್ಕಿಯಲ್ಲಿ ಅಮೂಸ್ಮೆಂಟ್ ಪಾರ್ಕ್ ಆಗಲಿ: ಬಿಜೆಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

Petition submitted by BJP workers Mandya
Published on

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ಗಗನಚುಕ್ಕಿಯಲ್ಲಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಕಾವೇರಿ ನದಿ ಬಳಿ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಮನವಿ ಸಲ್ಲಿಸಿದರು. ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಹಳೆಯದಾದ ಹಾಗೂ ಇತಿಹಾಸ ಪ್ರಸಿದ್ಧಿಯಾಗಿದೆ. ಇದನ್ನು ಚುರ್ಕಿಗಾರೆಯಿಂದ ಮತ್ತು ಏಕಶಿಲಾ ಪದರದ ಮೇಲೆ ಕಟ್ಟಲಾಗಿರುವ ಅಣೆಕಟ್ಟೆಯ ಪ್ರದೇಶದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಜಾರಿಗೊಳಿಸಿ ಡ್ಯಾಂಗೆ ಧಕ್ಕೆ ತರಲು ಹೊರಟಿರುವ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿದರು.

ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾವೇರಿ ಆರತಿ ಯೋಜನೆ ಮಾಡಲು ಹೊರಟಿರುವ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕನ್ನಂಬಾಡಿ ಕಟ್ಟೆ ಬಳಿ ಯೋಜನೆ ಮಾಡುವುದು ಸರಿಯಲ್ಲ. ಕಾವೇರಿ ಆರತಿಗೆ 100 ಕೋಟಿ ರೂ ಬದಲಿಗೆ 200 ಕೋಟಿ ರೂ ಖರ್ಚು ಮಾಡಿ ಕಾವೇರಿ ಮಾತೆಯನ್ನು ಸ್ಮರಿಸಲಿ. ಈ ಯೋಜನೆಯನ್ನು ಕೆಆರ್‌ಎಸ್ ಬಳಿ ಬಿಟ್ಟು ಶ್ರೀರಂಗಪಟ್ಟಣದ ದೇವಾಲಯದ ಸಮೀಪದ ಸ್ನಾನ ಘಟ್ಟದಲ್ಲಿ ಮಾಡಬೇಕು ಎಂದು ಮನವಿ ಮಾಡಿದರು.

ಡ್ಯಾಂ ಸಮೀಪದ ಬೃಂದಾವನ ಉದ್ಯಾನ ಮತ್ತು ತೋಟಗಾರಿಕೆ ಜಾಗ ಅರಣ್ಯ ಪ್ರದೇಶ ಎಂದು 1978ರಲ್ಲಿ ನೋಟಿಫಿಕೇಷನ್ ಆಗಿದೆ. ಅಣೆಕಟ್ಟೆಗೆ ಒಂದು ಕಿ.ಮೀ ದೂರದಲ್ಲಿರುವ ಪಕ್ಷಿಧಾಮದಲ್ಲಿ ನೀರುನಾಯಿ ಮತ್ತು ವಲಸೆ ಪಕ್ಷಿಗಳಿವೆ. 3 ಕಿ.ಮೀ. ದೂರದಲ್ಲಿ ರಂಗನತಿಟ್ಟು ಮತ್ತು ಕಾವೇರಿ ನದಿ ತೀರದಲ್ಲಿ ಪಕ್ಷಿಧಾಮವಿದೆ. ಪಕ್ಷಿ ಸಂಕುಲಕ್ಕೆ ಯೋಜನೆಯಿಂದ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.

ಅಮ್ಯೂಸ್‌ಮೆಂಟ್ ಪಾರ್ಕ್‌ಗಾಗಿ ಆಳವಾದ ದೊಡ್ಡ ಗುಂಡಿಗಳನ್ನು ತೋಡಿದರೆ ಶಿಲಾ ಪದರದ ಮೇಲೆ ನಿಂತಿರುವ ಕೆಆರ್‌ಎಸ್ ಅಣೆಕಟ್ಟೆ ಕಂಪಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿ.ಮೀ ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ. ಬೇರೆ ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಅಣೆಕಟ್ಟೆಯ ಸ್ವರೂಪವನ್ನು ಬದಲಿಸುವಂತಿಲ್ಲ. ಆದರೂ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ಕಾಯ್ದೆಯ ವಿರುದ್ಧವಾಗಿದೆ ಎಂದು ಆತಂಕಪಟ್ಟರು.

ರೈತರ ವಿರೋಧ ಕಟ್ಟಿಕೊಂಡು ಬೊಟಾನಿಕಲ್ ಉದ್ಯಾನ, ಜಂಗಲ್ ಬೋಟ್ ರೈಡ್, ಮೀನಾ ಬಜಾರ್, ಡಾಲ್ ಮ್ಯೂಸಿಯಂ, ಫೂಡ್ ಫಾಜಾ, ವಾಟರ್ ಪಾರ್ಕ್, ಲೇಸರ್ ಫೌಂಟೇನ್ ಶೋ, ಹೆಲಿಪ್ಯಾಡ್, ಜೈಹೋ ಫೌಂಟೇನ್ ಸೇರಿದಂತೆ ಹಲವು ಪ್ರವಾಸಿ ಕಾಮಗಾರಿಗಳನ್ನು ಮಾಡಲು ಹೊರಟಿರುವ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಎಸ್.ಆರ್.ಭೀಮೇಶ್, ಪ್ರಸನ್ನಕುಮಾರ್, ಕೆಂಪಾಚಾರಿ, ಚಂದ್ರಪ್ಪ, ಶಿವಲಿಂಗಪ್ಪ, ಎಸ್.ಸಿ.ಯೋಗೇಶ್, ಶಿವಣ್ಣ ಗೊರವಾಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net