

ವಿಜಯಪುರ : ಎಫ್ಆರ್ಎಸ್ ನಿಲ್ಲಿಸಲು ಒತ್ತಾಯಿಸಿ ಆ. 21 ರಂದು ಕಪ್ಪು ದಿನಾಚರಣೆ ಆಚರಿಸುವ ಹಿನ್ನೆಲೆಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂದ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಗುರುವಾರ ಬಾಲಭವನದ ನಗರ ಸಿಡಿಪಿಒ ಬಸವರಾಜ ಜಿಗಡೂರ ಹಾಗೂ ಗ್ರಾಮೀಣ ಸಿಡಿಪಿ ಎಸ್.ಸಿ. ಮ್ಯಾಗೇರಿ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಸಂದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕಿರುವ ಏಕೈಕ ಯೋಜನೆ ಐಸಿಡಿಎಸ್ ಮಾತ್ರ. ಯೋಜನೆಗೆ ಇಂದು 50 ವರ್ಷಗಳಾಗುತ್ತಾ ಬರುತ್ತಿದೆ. ಈ ಯೋಜನೆ ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಕ್ರಮ ರೂಪಿಸಬೇಕಿತ್ತು. ಆದರೆ, ಅದರ ಬದಲಾಗಿ ಸಂಕೀರ್ಣಗೊಳಿಸುತ್ತಿದೆ. ಅಲ್ಲದೆ, ಯಾವುದೇ ಸೌಲಭ್ಯ ನೀಡದೇ ಮುಖಚರ್ಯ ಗುರ್ತಿಸುವ ಕ್ರಮ (ಎಫ್ಆರ್ಎಸ್) ನ್ನು ಅಳವಡಿಸಿದ್ದರಿಂದ ತ್ರಮಟ್ಟದಲ್ಲಿ ಹಲವಾರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಸರ್ಕಾರ ಎಫ್ಆರ್ಎಸ್ ಕಡ್ಡಾಯಗೊಳಿಸುವ ಮೂಲಕ ಫಲಾನುಭವಿಗಳ ಹಕ್ಕನ್ನು ನಿರಾಕರಿಸುತ್ತಿವೆ. ಅಲ್ಲದೆ, ಅದರಿಂದ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ಸದ್ಯದ ದಿನಗಳಲ್ಲಿ ಸೈಬರ್ ವಂಚನೆಗಳು ಕೂಡ ಹೆಚ್ಚುತ್ತಿವೆ. ಕೂಡಲೇ ಎಫ್ಆರ್ಎಸ್ ರದ್ದು ಮಾಡಿ ಐಸಿಡಿಎಸ್ ಯೋಜನೆ ಖಾಯಂ ಮಾಡುವುದು ಸೇರಿದಂತೆ ಮುಂತಾದ ಬೇಡಿಕೆಗಳಿಗೆ ಸ್ಪಂದಿಸಬೇಕು.
ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವರ ಮನೆಯ ಮುಂದೆ ಅರ್ನಿಧಿಷ್ಟಾವಧಿಯ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುವರ್ಣಾ ಹಲಗಣಿ, ಜಯಶ್ರೀ ಪೂಜಾರಿ, ಶೈಲಾ ಕಟ್ಟಿ, ಯಮುನಾ ತೊರವಿ, ಆರಿಫಾ ಕನಮಡಿ, ಬಸಮ್ಮ ದೊಡಮನಿ, ಲಲತಾ ಉಕ್ಕಲಿ, ಕೀರ್ತಿ ಕುಲಕರ್ಣಿ, ರಾಜೇಶ್ವರಿ ಸಂಕದ, ಸೈರಾಬಾನು ಜಮಾದಾರ, ಸಾವಿತ್ರಿ ಗುಮಾಸ್ತೆ, ರಿಜ್ವಾನಾ ಕುರಶಿ, ಪ್ರೇಮಾ ಚೌಧರಿ, ಲಲಿತಾ ರಾಠೋಡ, ಮಹಾದೇವಿ ಚವಾಣ, ಶ್ರೀದೇವಿ ಒಗ್ಗೆನವರ ಮತ್ತಿತರರಿದ್ದರು.
ಎಫ್ಆರ್ಎಸ್ ನಿಲ್ಲಿಸಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂದ ಕಾರ್ಯಕರ್ತೆಯರು ವಿಜಯಪುರದಲ್ಲಿ ನಗರ ಸಿಡಿಪಿಒ ಬಸವರಾಜ ಜಿಗಡೂರ ಅವರಿಗೆ ಮನವಿ ಸಲ್ಲಿಸಿದರು.