

ಲಕ್ಷ್ಮೇಶ್ವರ: ಎನ್‌ಇಪಿ ರದ್ದು ನಿರ್ಧಾರವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಎಬಿವಿಪಿ ಪದಾಧಿಕಾರಿಗಳು ಶಿರಸ್ತೇದಾರ್ ರೇಣುಕಾ ಎಂ. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ದೊಡ್ಡಮನಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾಗಿದೆ. ದೇಶಾದ್ಯಂತ ಶಿಕ್ಷಣ ತಜ್ಞರ, ಪರಿಣಿತರ, ವಿದ್ಯಾರ್ಥಿ ಸಂಘಟನೆಗಳು ಚರ್ಚಿಸಿ ತಯಾರಿಸಿದ ಕರಡಿನ ಆಧಾರದಲ್ಲಿ ನೀತಿಯನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವು ಶಿಕ್ಷಣವನ್ನು ರಾಜಕೀಯ ವಸ್ತುವಾಗಿರಿಸದೆ, ಸಣ್ಣ-ಪುಟ್ಟ ದೋಷ ಕಂಡು ಬಂದಲ್ಲಿ ಸರಿಪಡಿಸಿಕೊಂಡು ಎನ್‌ಇಪಿ ರದ್ದುಗೊಳಿಸುವ ನಿಲುವನ್ನು ಕೈಬಿಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಲೂಕು ಸಂಚಾಲಕ ಮಾಂತೇಶ ಮಣಕವಾಡ, ನಗರ ಕಾರ್ಯದರ್ಶಿ ಶರಣಪ್ಪ ಶಿವನಗೌಡ್ರ, ಪ್ರದೀಪ ಶೆಟ್ಟರ, ಸೋಮು ಭದ್ರಾಪುರ, ಗಂಗಾಧರ ಸುಣಗಾರ, ವಿನಾಯಕ ಉಮಚಗಿ, ರಾಜಶೇಖರ ಅಕ್ಕೂರ, ಮನೋಜ ಹುಳ್ಳಿ, ಸಾಗರ ಮೆಹರವಾಡೆ, ಕಾರ್ತಿಕ ಕೊಡ್ಲಿ, ಶಶಿಕುಮಾರ ಜೋಗೆರ ಮತ್ತಿತರಿದ್ದರು.