

ಮುಂಡರಗಿ: ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಸ್ಥಳೀಯರು, ವಿವಿಧ ಸಂಘಟನೆಗಳ ಪ್ರಮುಖರು ಶುಕ್ರವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿರುವುದು ತೀವ್ರ ಖಂಡನೀಯ. ಸ್ವಾತಂತ್ರೃ ಬಂದು 78 ವರ್ಷ ಗತಿಸಿದರೂ ಒಂದು ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ. ಬಡವರ ಮಕ್ಕಳು, ಹಿಂದುಳಿದ ವರ್ಗದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಗದಗ ಜಿಲ್ಲೆಗೆ ಆಗಮಿಸಿದಾಗ ಪ್ರೌಢಶಾಲೆ ಮಂಜೂರಾತಿ ಮಾಡುವುದಾಗಿ ತಿಳಿಸಿದ್ದರು. 147 ಹೊಸ ಪ್ರೌಢಶಾಲೆಗಳ ಮಂಜೂತಾತಿ ನೀಡಿ, ಮುಂಡರಗಿಗೆ ನೀಡದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ್ ಪರವಾಗಿ ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ದೇವಪ್ಪ ಇಟಗಿ, ಬಸವರಾಜ ನವಲಗುಂದ, ಶಂಕರ ಉಳ್ಳಾಗಡ್ಡಿ, ರವಿಗೌಡ ಪಾಟೀಲ, ಸತ್ಯಪ್ಪ ಮೋರನಾಳ, ಬಸಪ್ಪ ವಡ್ಡರ, ಶೇಖಪ್ಪ ದಂಡಿನ ಇತರರು ಇದ್ದರು.