ಹಸಿ ಬರಗಾಲ ಪ್ರದೇಶವೆಂದು ಘೋಷಿಸಲು ಮನವಿ

SGN manavi
Published on

ಶಿಗ್ಗಾಂವಿ: ತಾಲೂಕಿನಲ್ಲಿ ಮುಂಗಾರು ವಿಳಂಬ ಹಾಗೂ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ತಾಲೂಕನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಲು ರೈತ ಸಂಘ ಹಸಿರು ಸೇನೆ ತಾಲೂಕು ಘಟಕದಿಂದ ತಹಸೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆಯಿಂದಾಗಿ ರೈತರು ಅರೆಬರೆ ಹಸಿಯಲ್ಲಿ ಬಿತ್ತನೆ ಮಾಡಿದರೂ ಸರಿಯಾಗಿ ಹುಟ್ಟಲಿಲ್ಲ. ಬಳಿಕ 15 ದಿನಗಳವರೆಗೆ ಸುರಿದ ನಿರಂತರ ಮಳೆಯಿಂದ ಉಳಿದ ಕೆಲ ಬೆಳೆಗಳೂ ಹಾಳಾಗಿವೆ. ಶಿಗ್ಗಾಂವಿ ತಾಲೂಕು ಅರೆ ಮಲೆನಾಡ ಪ್ರದೇಶವಾದ್ದರಿಂದ ಕೂಡಲೇ ಹಸಿ ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕು. ನಿರಂತರ ಮಳೆಗೆ ತಾಲೂಕಿನಲ್ಲಿ ಬಿದ್ದ ಮನೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕು ಮತ್ತು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.

ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಮುತ್ತು ಗುಡಿಗೇರಿ, ಶಂಕರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಬಸವರಾಜ ಜೇಕಿನಕಟ್ಟಿ, ಸಂತೋಷ ಚಾಕಲಾಬ್ಬಿ, ಅಶೋಕ ಮಡ್ಲಿ, ಈರಪ್ಪ ಸುಣಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net