

ಗುಂಡ್ಲುಪೇಟೆ: ವೈಜ್ಞಾನಿಕ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಹಾಗೂ ಬಂಡವಾಳಗಾರರ ಪರವಾದ ಕಾನೂನು ತಿದ್ದುಪಡಿ ವಿರೋಧಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಿದ್ದುಬರಗಿ ನೇತೃತ್ವದಲ್ಲಿ ಮಂಗಳವಾರ ತಾಲೂಕು ಕಚೇರಿಗೆ ತೆರಳಿದ ಸಂಘದ ಪದಾದಿಕಾರಿಗಳು ಕಾರ್ಯನಿರ್ವಾಹಕಾಧಿಕಾರಿ ಷಣ್ಮುಗಂ ಅವರನ್ನು ಭೇಟಿ ಮಾಡಿದರು. ಸಂಘವು ಬೆಂಗಳೂರಿನಲ್ಲಿ ಗ್ರಾಮ ಪಂಚಾಯಿತಿ ನೌಕರರ 19 ಬೇಡಿಗಳನ್ನು ಬಗೆಹರಿಸಲು ಅನಿದಿಷ್ಟಾವಧಿ ಧರಣಿ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರು ಸಂಘದ ಮುಖಂಡರ ಸಭೆ ಕರೆದು, ಇಲಾಖೆಯ ಮುಖ್ಯಾ ಕಾರ್ಯದರ್ಶಿ, ಪಂಚಾಯತ್‌ರಾಜ್ ಆಯುಕ್ತರ ಸಮ್ಮುಖದಲ್ಲಿ ಚರ್ಚೆ ಮಾಡಿತು. ಪಿಂಚಣಿ ಸೇವಾ ಹಿರಿತನ ಭತ್ಯೆ ಹೆಚ್ಚಳ, ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿ ಪ್ರತಿ ಪಂಚಾಯಿತಿಗೂ ಲೆಕ್ಕ ಸಹಾಯಕ ನೇಮಕಾತಿ ಹಾಗೂ ಆರೋಗ್ಯ ವಿಮೆ ಸೇರಿದಂತೆ ಪ್ರಮುಖ ಬೇಡಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರ ಕೈ ಬಿಡಲಾಗಿತ್ತು. ಆದರೆ ಇನ್ನು ಆಶ್ವಾಸನೆಯಾಗಿಯೇ ಉಳಿದಿದೆ. ಆದ್ದರಿಂದ ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಾಗೂ ಬಂಡವಾಳಗಾರರ ಬೆಂಬಲಿಸುವ ಕಾನೂನು ತಿದುಪಡಿ ವಿರೋಧಿಸಿ ಸಹಿ ಸಂಗ್ರಹಿಸಿದ್ದು ಇದನ್ನು ಕಾರ್ಮಿಕ ಸಚಿವರು, ಪಂಚಾಯತ್ ರಾಜ್ ಸಚಿವರಿಗೆ ಕಳಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕತುಪ್ಪೂರು ಮಲ್ಲು, ತಾಲೂಕು ಅಧ್ಯಕ್ಷ ಬೊಮ್ಮನಹಳ್ಳಿ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೂರು ಸಿದ್ದರಾಜು, ಮಂಜು, ಸಂಪತ್ತು ಲೋಕೇಶ, ಚಿನ್ನರಾಜು, ಶಿವಮ್ಮ, ನಾಗರಾಜು ಇದ್ದರು.