ಖಾಸಗಿ ಮಸೂದೆ ಮಂಡಿಸಲು ಒತ್ತಾಯ: ಸಂಯುಕ್ತ ಕಿಸಾನ್ ಮೋರ್ಚಾ ನಿಯೋಗದಿಂದ ಮನವಿ

Petition by the delegation of Samyukta Kisan Morcha Mandya
Published on

ಮಂಡ್ಯ: ದೆಹಲಿಯಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆಗಳ ಬಗ್ಗೆ ಸಂಸತ್‌ದಲ್ಲಿ ಖಾಸಗಿ ಮಸೂದೆ ಮಂಡಿಸಲು ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಾಗಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ನಿಯೋಗ ಮನವಿ ಮಾಡಿತು.

ಸಂಸದರ ಕಚೇರಿಗೆ ತೆರಳಿದ ನಿಯೋಗ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದೇಶದ ರಾಜಧಾನಿ ದೆಹಲಿಯಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಮತ್ತು ಎಂಎಸ್‌ಪಿ ದರದಲ್ಲಿ ಬೆಳೆಗಳ ಖರೀದಿಗೆ ಖಾತರಿ ಕಾನೂನನ್ನು ಜಾರಿಗೆ ತರಲು ಐತಿಹಾಸಿಕ ಚಳವಳಿ ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಎಂಎಸ್‌ಪಿ ಗ್ಯಾರಂಟಿ ಕಾನೂನು ಮಾಡಲು ಸಮಿತಿ ರಚನೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೆ ಕಾನೂನು ರೂಪಿಸದ ಕೇಂದ್ರ ಸರ್ಕಾರ ವಿಳಂಬ ನೀತಿ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಚಿವರ ಜತೆ ನಾಲ್ಕು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಹೊರಟಿದ್ದ ರೈತರ ಮೇಲೆ ಹರಿಯಾಣದ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ನಡೆಸಿದ ಹಿಂಸಾಚಾರದಲ್ಲಿ ರೈತ ಶುಭಾಕರನ್ ಸಿಂಗ್ ಹುತಾತ್ಮರಾದರು. ಐವರು ರೈತರು ದೃಷ್ಟಿ ಕಳೆದುಕೊಂಡು 433 ರೈತರು ಗಾಯಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಮುನ್ನ ಜಾತ್ಯಾತೀತ ಜನತಾದಳ ಪ್ರಣಾಳಿಕೆಯಲ್ಲಿ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಆಶ್ವಾಸನೆ ನೀಡಿತ್ತು. ಹಾಗಾಗಿ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಚುನಾಯಿತರಾದರು. ಆದ್ದರಿಂದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸುವುದು ಜವಾಬ್ದಾರಿ ಎಂಬುದನ್ನು ಅರಿಯಬೇಕು. ಹಾಗೊಮ್ಮೆ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸದಿದ್ದರೆ ಕುಮಾರಸ್ವಾಮಿ ಮತ್ತು ಬಿಜೆಪಿ ಅಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಹೇಳಿದರು.

ರೈತರಿಗೆ ಎಂಎಸ್‌ಪಿ ದರದಲ್ಲಿ ಎಲ್ಲ ಬೆಳೆಗಳನ್ನು ಖರೀದಿಸಲು ಖಾತರಿ ಕಾನೂನು ರೂಪಿಸಬೇಕು. ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆಗಳನ್ನ ನಿಗದಿಪಡಿಸಬೇಕು. ರೈತರು ಮತ್ತು ಕೂಲಿಕಾರರನ್ನು ಸಂಪೂರ್ಣ ಸಾಲದಿಂದ ಮುಕ್ತಗೊಳಿಸಬೇಕು. ಭಾರತವು ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯಿಂದ ಹೊರಬರಬೇಕು. ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು. 60 ವರ್ಷ ತುಂಬಿದ ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಲ್ಲಿ ತಿದ್ದುಪಡಿಗಳನ್ನು ಮಾಡಬೇಕು. ನಕಲಿ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲು ನಿಬಂಧನೆಗಳನ್ನು ಮಾಡಬೇಕು. ಬೀಜಗಳ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದೆ.

ಬರ, ಅತಿವೃಷ್ಟಿ, ಮಳೆ ಹಾನಿ, ಪ್ರಕೃತಿ ವಿಕೋಪ ಪರಿಹಾರ, ಎನ್‌ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಬೇಕು. ವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡುವಂತಾಗಬೇಕು. ಹರಿಯಾಣದಲ್ಲಿ ರೈತರ ಆಂದೋಲನ-2ರ ವೇಳೆ ಗುಂಡು ಹಾರಿಸಿ ರೈತರಿಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೆತರ) ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಬಿ.ಮಹದೇವಪ್ಪ, ಮಹೇಶ್, ಚೋಟ್ಟನಹಳ್ಳಿ ಶಂಕರೇಗೌಡ, ದೇವರಾಜ್, ವೆಂಕಟೇಶ್, ಕಿರಗಸೂರು ಶಂಕರ, ನಾಗರಾಜ್, ನೀಲಕಂಠಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net