ವಂಶವೃಕ್ಷ ನಿಯಮಾವಳಿ ಮುಂದುವರೆಸಲು ಆಗ್ರಹ: ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದಿಂದ ಮನವಿ

Petition by Sugarcane Growers Union Mandya
Published on

ಮಂಡ್ಯ: ಹಿಂದಿನ ಪದ್ಧತಿಯಂತೆ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಮಹಜರು ನಡೆಸಿ ನೀಡುವ ವಂಶವೃಕ್ಷ ನಿಯಮಾವಳಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಒಕ್ಕೂಟದ ಪದಾಧಿಕಾರಿಗಳು, ನಿಯಮಾವಳಿ ಬದಲಾವಣೆಯಿಂದಾಗುತ್ತಿರುವ ತೊಂದರೆ ಕುರಿತು ವಿವರಿಸಿದರು. ಇತ್ತೀಚೆಗೆ ಆನ್‌ಲೈನ್ ವಂಶವೃಕ್ಷ ಪಡೆಯುವುದರ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಆತಂಕ ತಂದಿದೆ. ಹಲವು ವರ್ಷದ ಹಿಂದೆ ಮೃತಪಟ್ಟವರಿಗೆ ಸಂಬಂಧಿಸಿದಂತೆ ಮರಣ ಪತ್ರವನ್ನು ನೋಂದಾಯಿಸದೇ ಇರುವ ಪ್ರಕರಣದಲ್ಲಿ ಕಂದಾಯ ಇಲಾಖೆ ಹೊರತಾಗಿ ಹೊಸ ಪ್ರಾಧಿಕಾರದ ಮೂಲಕ ಮರಣ ಪತ್ರ ಪಡೆಯಬೇಕು. ಅದನ್ನು ತಹಸೀಲ್ದಾರ್ ಕಚೇರಿಗೆ ತಲುಪಿಸಿ ತದನಂತರ ವಂಶವೃಕ್ಷವನ್ನು ಪಡೆಯಬೇಕೆಂಬ ಆದೇಶ ಸಾರ್ವಜನಿಕರು ಸಮಸ್ಯೆ ತಂದೊಡ್ಡಿದೆ ಎಂದರು.

ರೈತ ಕುಟುಂಬಕ್ಕೆ ಸಂಬಂಧಿಸಿದಂತೆ ಆಸ್ತಿ ಹಂಚಿಕೆ ಮತ್ತು ಬ್ಯಾಂಕ್ ಸೇರಿದಂತೆ ಕೆಲವು ಕೆಲಸಕ್ಕೆ ಅಗತ್ಯವಿರುವ ವಂಶವೃಕ್ಷದ ಅಲಭ್ಯತೆಯಿಂದ ತೊಡಕಾಗಿ ಸಂಭವಿಸಿದೆ. ಮಾತ್ರವಲ್ಲದೆ ಪ್ರಾಧಿಕಾರದಲ್ಲಿ ಮರಣ ಪತ್ರವನ್ನು ಪಡೆಯುವ ಸಂದರ್ಭದಲ್ಲಿ ಹಲವು ತಿಂಗಳು ಕಾಯಬೇಕಾದ ಜತೆಗೆ ಜತೆಗೆ ಶುಲ್ಕಕ್ಕಾಗಿ ಸಾವಿರಾರು ರೂಗಳನ್ನು ಹೆಚ್ಚುವರಿಯಾಗಿ ಭರಿಸುವಂತೆ ಆಗಿದೆ. ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳದಿಂದ ಬಸವಳಿದಿರುವ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗೆ ಅಲೆಯಬೇಕಾಗಿದೆ. ಒಟ್ಟಾರೆ ಹೊಸ ಆದೇಶ ಮರಣಶಾಸನದಂತೆ ಆಗಿದೆ. ಆದ್ದರಿಂದ ಹಿಂದಿನ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗುವಂತೆ ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಇಂಡುವಾಳು ಚಂದ್ರಶೇಖರ್, ಯೋಗಾನಂದ, ಹೆಮ್ಮಿಗೆ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net