

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರಿಶ್ಚಿಯನ್ ಶೈಕ್ಷಣಿಕ ಸಂಸ್ಥೆಗಳು ದಸರಾ ರಜೆ ನೀಡದೆ ಹಿಂದು ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆಧಾರ ರಹಿತ ಹೇಳಿಕೆ ಖಂಡಿಸಿ ನಗರದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವತಿಯಿಂದ ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರು ದಸರಾ ರಜೆಯಲ್ಲಿ ವರ್ಗಗಳನ್ನು ನಡೆಸುತ್ತಿರುವ ಶಾಲೆಗಳ ಮಾನ್ಯತೆ ರದ್ದು ಮಾಡುವ ಹಾಗೂ ಶಾಲೆಗಳ ಮುಖ್ಯಸ್ಥರನ್ನು ಬಂಧಿಸುವಂತೆ ಒತ್ತಾಯಿಸಿರುವುದು ಭಯ ಬಿತ್ತಿದಂತಾಗಿದೆ. ದಸರಾ ರಜೆಯಲ್ಲಿ 5 ದಿನಗಳ ಕಡಿತ ಮಾಡಿ ಕ್ರಿಸ್ಮಸ್ಗೆ ನೀಡುವ ರೂಢಿ ಹಲವು ದಶಕಗಳಿಂದ ಇದೆ. ಅದೂ ಶಾಲಾ ಶಿಕ್ಷಣ ಇಲಾಖೆ ಅನುಮತಿ ಪಡೆದು ಮಾಡಲಾಗಿದೆ.
ಆದರೆ ಇದನ್ನು ಗಮನಿಸದ ಪ್ರಮೋದ ಮುತಾಲಿಕ ಅವರು ತಮ್ಮ ಸಂಗಡಿಗರು, ಪೊಲೀಸ್ ಸಿಬ್ಬಂದಿ ಸಮೇತ ಶಾಲಾ ಆವರಣ ಪ್ರವೇಶಿಸಿದ್ದಲ್ಲದೇ, ಶಾಲಾ ಮುಖ್ಯಸ್ಥರೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ರಜಾ ಅವಧಿ ಬಗ್ಗೆ ಸ್ಪಷ್ಟೀಕರಣ ನೀಡಿದರೂ ಶಾಲೆಗಳ ಹಾಗೂ ಅಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಘನತೆಗೆ ಧಕ್ಕೆ ಬರುವ ರೀತಿ ಪತ್ರಿಕಾ ಹೇಳಿಕೆ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಇದು ಸರಿಯಲ್ಲ. ಇಂತಹ ಸಂಘಟನೆಗಳಿಗೆ ಸೂಕ್ತ ನಿರ್ದೆಶನ ನೀಡಬೇಕಲ್ಲದೆ, ಇಂತಹ ಘಟನೆ ಮರುಕಳಿಸದಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ದಿವಾಕರ ಪುನೀತ್, ವಿಲ್ಸನ್ ಮೈಲಿ, ಅಲ್ಬರ್ಟ್ ಕಬಾಡಗಿ, ಸ್ಟೀಪನ್ ಜಯಚಂದ್ರ, ಪ್ರಕಾಶ ಹುಗ್ಗಿ, ರೀಟಾ ಕಂಠಿ, ಸ್ಟೆಲ್ಲಾ ಅರಳಿಕಟ್ಟಿ, ಇತರರು ಇದ್ದರು.