

ಮಂಡ್ಯ: ಉತ್ತು ಬಿತ್ತುವ ಅನ್ನದಾತರ ತುತ್ತನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ. ಮಳೆಯಿಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಾಗಿ ಬೆಳೆದುನಿಂತಿರುವ ಬೆಳೆ ರಕ್ಷಣೆಗಾಗಿ ಪರದಾಡುತ್ತಿರುವ ರೈತರ ಕಷ್ಟ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿಗೆ ಅರಿವಾಗದಿರುವುದು ನೋವಿನ ಸಂಗತಿ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಬೇಸರ ವ್ಯಕ್ತಪಡಿಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕುಡಿಯುವ ನೀರು ಹಾಗೂ ಬೆಳೆ ರಕ್ಷಣೆಗಾಗಿ ರಾಜಕೀಯ ಪಕ್ಷಗಳ ನೇತಾರರು ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯತೆ ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಮಿಳುನಾಡು ರಾಜ್ಯದ ಜನಪ್ರತಿನಿಧಿಗಳ ಒಗ್ಗಟ್ಟು ನಮಗೆ ಸಂಕಷ್ಟ ತಂದೊಡ್ಡಿದೆ. ಕಾವೇರಿ ಕಣಿವೆ ಅಣೆಕಟ್ಟೆಗಳಲ್ಲಿ ನೀರಿನ ಶೇಖರಣೆ ಕ್ಷೀಣಿಸುತ್ತಿದೆ. ಆದಾಗ್ಯೂ ನೀರು ಬಿಡುಗಡೆಯ ತೀರ್ಪು ನೀಡುತ್ತಿರುವುದು ಅವೈಜ್ಞಾನಿಕವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ನ್ಯಾಯ ಪಡೆಯಲು ಮುಂದಾಗಬೇಕಿದೆ. ಕಾವೇರಿ ವಿವಾದ ಕೇವಲ ಇಂದಿನದ್ದಲ್ಲ. 1992, 2013, 2018ರಲ್ಲೂ ಪ್ರತಿಭಟನೆ ನಿರಂತರವಾಗಿ ನಡೆದಿತ್ತು. ಈ ಹಿಂದೆ ಸಾಗರೋಪಾದಿಯಲ್ಲಿ ಜನ ಪ್ರತಿಭಟನೆಗೆ ಭಾಗವಹಿಸಿ ಆಳುವ ಸರ್ಕಾರವನ್ನು ಎಚ್ಚರಿಸಿರುವ ಉದಾಹರಣೆ ಇದೆ ಎಂದರು.
ನೀರಿನ ಸಂಗ್ರಹದ ಮಾಹಿತಿ ಅರಿಯದೇ ಪ್ರಾಧಿಕಾರ ಪ್ರತಿನಿತ್ಯ 5 ಅಥವಾ 3 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಹೇಳುವುದು ಸರಿಯಲ್ಲ. ಇನ್ನು ರಾಜ್ಯಸರ್ಕಾರ ಸಂಕಷ್ಟ ಪರಿಸ್ಥಿತಿಯನ್ನು ಸಂವೇದನೆಯಿಂದ ತಮಿಳುನಾಡಿಗೆ ಅರ್ಥೈಸದಿರುವುದು ಬೇಸರದ ಸಂಗತಿ. ಮಂಡ್ಯ ಜಿಲ್ಲೆಯ ರೈತರು ಸೂಕ್ಷ್ಮ ಮನಸ್ಸಿನವರು. ಅನಿವಾರ್ಯವಾದರೆ ಯಾವ ಮಟ್ಟದ ಪ್ರತಿಭಟನೆಯಾದರೂ ಮಾಡಬಲ್ಲರು ಎನ್ನುವುದನ್ನು ಜನಪ್ರತಿನಿಧಿಗಳು ಅರ್ಥೈಸಿಕೊಂಡು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ನಾವೇ ಹಸಿದಿರುವಾಗ ಬೇರೆಯವರಿಗೆ ಸಹಾಯ ಮಾಡುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ರೈತ ಹಿತರಕ್ಷಣಾ ಸಮಿತಿಯ ಹೋರಾಟದ ಮುಂದಿನ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ಸಮಿತಿಯ ಸುನಂದಾ ಜಯರಾಂ, ಕಾರಸವಾಡಿ ಮಹದೇವು, ಅಂಬುಜಮ್ಮ, ಕೆ.ಬೋರಯ್ಯ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಇತರರಿದ್ದರು.