2 ತೊಲ ಬಂಗಾರದ ಚೈನ್ ನುಂಗಿದ ನಾಯಿಮರಿ: ವೈದ್ಯರ ಬಳಿ ಕರೆದೊಯ್ದ ಮಾಲೀಕನಿಗೆ ಕಾದಿತ್ತು ಶಾಕ್!​

Gold Chain
Published on

ಕೊಪ್ಪಳ: ಸಾಮಾನ್ಯವಾಗಿ ನಮಗೆ ಭದ್ರತೆ ನೀಡಲೆಂದು ನಾಯಿ ಸಾಕುತ್ತೇವೆ. ಆದರೆ, ಇಲ್ಲೊಂದು ಕುಟುಂಬ ಮಾಡಿದ ತಪ್ಪಿಗೆ ಹಗಲು ರಾತ್ರಿ ತಮ್ಮ‌ ಸಾಕು ನಾಯಿಗೆ ಭದ್ರತೆ ನೀಡುವಂತಾಗಿದೆ. ಇದಕ್ಕೆಲ್ಲ ಕಾರಣವಾದದ್ದು ಬಂಗಾರದ ಚೈನ್ ಎಂಬುದು ಕುತೂಹಲದ ವಿಷಯ.

ಹೌದು, ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದಿಲೀಪಕುಮಾರ್ ಹಿರೇಮಠ ಎಂಬುವರು ಪಮಾರಿನ್ ತಳಿಯ ನಾಯಿ ಮರಿಯೊಂದನ್ನ ಸಾಕಿದ್ದಾರೆ. ಸದ್ಯ 2 ತಿಂಗಳ ಮರಿಯಿದ್ದು ಮನೆ ಮಂದಿಗೆಲ್ಲ ಅಚ್ಚುಮೆಚ್ಚಾಗಿದೆ. ಆದರೆ, ಶುಕ್ರವಾರ ದಿಲೀಪ್​ ಕುಮಾರ್ ತಮ್ಮ ಕೊರಳಲ್ಲಿದ್ದ 2 ತೊಲ ಬಂಗಾರದ ಚೈನ್ ತೆಗೆದು ಪಕ್ಕಕ್ಕಿರಿಸಿ ನಿದ್ದೆಗೆ ಜಾರಿದ್ದಾರೆ. ಈ ವೇಳೆ ನಾಯಿಮರಿ ಚೈನನ್ನು ಕಚ್ಚಿ ತುಂಡು ಮಾಡಿ ತಿಂದುಬಿಟ್ಟಿದೆ. ನಿದ್ದೆಯಿಂದ ಎದ್ದ ಬಳಿಕ ನಾಯಿ ಬಳಿ ಚೈನ್ ತುಂಡುಗಳನ್ನು ಗಮನಿಸಿದ ಮಾಲೀಕನಿಗೆ ಶಾಕ್ ಆಗಿದೆ. ಕೂಡಲೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಚಿಕ್ಕ ಮರಿಯಾದ ಕಾರಣ ಆಪರೇಷನ್ ಬೇಡವೆಂದು ಡಾಕ್ಟರ್ ತಿಳಿಸಿದ್ದಾರೆ. ಇದೆ ವೇಳೆ ನಾಯಿ ಬಹಿರ್ದೆಸೆ ಮಾಡಿದ್ದು, ಒಂದೆರೆಡು ತುಂಡುಗಳು ಬಂದಿವೆ.

ಸದ್ಯ 5 ಸಾವಿರ ರೂ. ನೀಡಿ ಮನೆಗೆ ಭದ್ರತೆ ನೀಡಲೆಂದು ತಂದ ನಾಯಿಯಿಂದ 80 ಸಾವಿರ ರೂ. ಕಳೆದುಕೊಳ್ಳುವಂತಾಗಿದೆ. ಅಲ್ಲದೇ ನುಂಗಿದ ಚೈನ್ ಹೊರಗೆ ಬರುವವರೆಗೂ ಹಗಲು ರಾತ್ರಿ ನಾಯಿ ಮನೆ ಬಿಟ್ಟು ಕದಲದಂತೆ ಮಾಲೀಕರು ನಿದ್ದೆಗೆಟ್ಟು ಕಾಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net