ಭತ್ತದ ಬೆಳೆಗೆ ಕೀಟಗಳೇ ಕಂಟಕ: ಜಿಲ್ಲಾದ್ಯಂತ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು

Pest problems for Paddy crop Mandya
Published on

ಮಂಡ್ಯ: ಮಳೆಯ ಅಭಾವದ ನಡುವೆಯೂ ರೈತರು ಬೆಳೆದಿರುವ ಭತ್ತದ ಬೆಳೆಗೆ ರೋಗ ಹರಡುತ್ತಿರುವುದರಿಂದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಜಿಲ್ಲಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ. ಮಾತ್ರವಲ್ಲದೆ, ರೋಗವನ್ನು ಹತೋಟಿಗೆ ತರುವ ಹಾಗೂ ಮುಂಜಾಗ್ರತೆ ವಹಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟಿದೆ. ಆದಾಗ್ಯೂ ಕೆಆರ್‌ಎಸ್ ಡ್ಯಾಂನಿಂದ ಹರಿಸಿದ ನೀರು ಹಾಗೂ ಪಂಪ್‌ಸೆಟ್ ನೀರನ್ನು ಬಳಸಿಕೊಂಡು ಭತ್ತವನ್ನು ಬೆಳೆಯಲಾಗಿದೆ. ಆದರೆ ಈ ಬಾರಿ ನಿಗದಿತ ಗುರಿಯಷ್ಟು ಬಿತ್ತನೆಯಾಗಿಲ್ಲ. ಈ ನಡುವೆ, ಬೆಳೆಗೆ ಕೀಟಗಳು ಬಾಧೆ ನೀಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಜಿಲ್ಲಾ ಪೀಡೆ ಸರ್ವೇಕ್ಷಣಾ ತಂಡ ಹಾಗೂ ವಿ.ಸಿ ಫಾರ್ಮ್ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೆಳೆ ಪರಿಶೀಲನೆ ನಡೆಸುತ್ತಿದ್ದಾರೆ.
50,168 ಹೆಕ್ಟೇರ್‌ನಲ್ಲಿ ಬೆಳೆ: ಜಿಲ್ಲೆಯಲ್ಲಿ 50,168 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಈ ವರ್ಷದ ನಿಗದಿತ ಗುರಿಯಂತೆ 58,580 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಮಂಡ್ಯ ತಾಲೂಕಿನಲ್ಲಿ 10,022 ಹೆಕ್ಟೇರ್, ಮದ್ದೂರಿನಲ್ಲಿ 8,797, ಮಳವಳ್ಳಿಯಲ್ಲಿ 8,465, ಶ್ರೀರಂಗಪಟ್ಟಣದಲ್ಲಿ 8,780, ಪಾಂಡವಪುರದಲ್ಲಿ 2,740, ಕೆ.ಆರ್.ಪೇಟೆಯಲ್ಲಿ 10,654 ಹಾಗೂ ನಾಗಮಂಗಲ ತಾಲೂಕಿನಲ್ಲಿ 710 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಇದೆ. ಈ ಪೈಕಿ ಕೆಲವೆಡೆ ರೋಗ ಕಾಣಿಸಿಕೊಂಡಿದೆ.
ನಾಲ್ಕು ತಾಲೂಕಿನಲ್ಲಿ ಅಧಿಕಾರಿಗಳ ಪರಿಶೀಲನೆ: ರೋಗದ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡ ಮಂಡ್ಯ, ಮದ್ದೂರು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದೆ. ಅಂತೆಯೆ, ಬೆಳೆಯಲ್ಲಿ ಕಂಡುಬಂದ ರೋಗ ಬಾಧೆಯನ್ನು ಗಮನಿಸಿ ಹತೋಟಿಗೆ ವಹಿಸಬೇಕಾದ ಕ್ರಮವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ. ಮಾತ್ರವಲ್ಲದೆ, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ ಸಲಹೆ ಪಡೆಯಬಹುದೆಂದು ಜಾಗೃತಿ ಮೂಡಿಸಿದ್ದಾರೆ.
ಪರಿಶೀಲನಾ ತಂಡದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ವಲಯ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ, ಪ್ರಾಧ್ಯಾಪಕರಾದ ಡಾ.ಬಿ.ಜಿ.ಶೇಖರ್, ಡಾ.ಸನತ್‌ಕುಮಾರ್, ಡಾ.ಜಿ.ಸುಗಿತಾ, ಡಾ.ಅತಿಫ ಮುನವರಿ, ಸಹಾಯಕ ಕೃಷಿ ನಿರ್ದೇಶಕರಾದ ಜಿ.ಹರ್ಷ, ಸೌಮ್ಯಶ್ರೀ, ಪರಮೇಶ, ದೀಪಕ್, ಪ್ರಿಯದರ್ಶಿನಿ ಇತರರಿದ್ದರು.

ಯಾವ್ಯಾವ ರೋಗ, ಹತೋಟಿಗೆ ಕ್ರಮವೇನು?: ಪ್ರಮುಖವಾಗಿ ಬಹುತೇಕ ರೈತರು ಮೂಲಗೊಬ್ಬರವಾಗಿ ಪೊಟ್ಯಾಷ್ ಬಳಕೆ ಮಾಡದ ಪರಿಣಾಮ ರೋಗ ಹೆಚ್ಚಾಗಿರುತ್ತದೆ. ಮೇಲುಗೊಬ್ಬರವಾಗಿ 10 ಕೆ.ಜಿ ಯೂರಿಯಾ ಜತೆಗೆ 16 ಕೆ.ಜಿ ಎಂ.ಒ.ಪಿ ಪ್ರತಿ ಎಕರೆಗೆ ಹೂವಾಡುವುದಕ್ಕಿಂತ ಮುಂಚೆ ನೀಡಬೇಕಿದೆ.
ಎಲೆಕವಚ ಕೊಳೆರೋಗ ಎಲೆಗಳ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಒಣಗಿರುತ್ತದೆ. ತೆನೆ ಕವಚ ಕೊಳೆ ರೋಗದಲ್ಲಿ ಬಾವುಟದ ಗರಿಯ ಕವಚದ ಮೇಲೆ ಕಂದು ಚುಕ್ಕೆಗಳಾಗಿ ತೆನೆಯು ಸ್ವಲ್ಪ ಮಾತ್ರ ಹೊರ ಬಂದಿರುತ್ತದೆ. ಕಂದು ಎಲೆಚುಕ್ಕೆ ರೋಗ ಹರಡಿದರೆ ಎಲೆಗಳ ಮೇಲೆ ಮೊಟ್ಟೆಯಾಕಾರ ಅಥವಾ ಕಿರಿದಾದ ಉದ್ದನೆಯ ಕಂದು ಚುಕ್ಕೆ ಕಾಣಿಸಿಕೊಳ್ಳುತ್ತದೆ. ಗರಿ ಮಡಿಸುವ ಹುಳುಗಳು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುವುದು. ಇಂತಹ ಗರಿಗಳೊಳಗೆ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಬಿಳಿಯ ಹಾಳೆಯಂತೆ ಕಾಣಿಸಿ ಒಣಗುತ್ತಿದೆ. ತೆನೆ ತಿಗಣೆಯು ತೆನೆ ಹಾಲು ತುಂಬುವ ಹಂತದಲ್ಲಿ ರಸ ಹೀರುತ್ತದೆ. ಅಂತಹ ಕಾಳುಗಳು ಜೊಳ್ಳಾಗಬಹುದು ಅಥವಾ ಚೀಕಲು ಕಾಳು ಆಗಲಿವೆ. ಇದಲ್ಲದೆ ಕಬ್ಬು ಬೆಳೆಯಲ್ಲಿ ಪ್ರಮುಖವಾಗಿ ಆದಿ ಸುಳಿ ಕೊರೆವ ಹುಳು, ಮೇಲಿನ ಸುಳಿ ಕೊರಕ ಕೀಟದ ಬಾಧೆ ಕಂಡುಬಂದಿರುತ್ತದೆ. ಇನ್ನು ಮುಸುಕಿನ ಜೋಳ ಬೆಳೆಯಲ್ಲಿ ಲದ್ದಿಹುಳು ಬಾಧೆ ಕಂಡುಬಂದಿರುತ್ತಿದ್ದು, ಸುಳಿಯಲ್ಲಿ ಮರಿಹುಳುಗಳು ಗರಿಗಳನ್ನು ತಿನ್ನುವುದರ ಜತೆಗೆ ಸುಳಿಗರಿಯಲ್ಲಿ ಮರಿಗಳ ಹಿಕ್ಕೆಗಳು ಕಂಡುಬಂದಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net