ಶೇಂಗಾ, ಜೋಳ, ಹೆಸರು ಬೆಳೆಗೆ ಕೀಟಗಳ ಕಾಟ

crop
ಲದ್ದಿಹುಳು ಕೀಟಬಾಧೆಯಿಂದ ಗೋವಿನಜೋಳ ಬೆಳೆಯ ಎಲೆಗಳಲ್ಲಿ ರಂಧ್ರಗಳಾಗಿ ನಾಶವಾಗುತ್ತಿದೆ (ಎಡಚಿತ್ರ). ಹೆಸರು ಬೆಳೆಯಲ್ಲಿ ಹಳದಿರೋಗ, ಕಾಯಿಕೊರಕ ಕೀಟದಿಂದ ಬೆಳೆ ಹಾನಿಯಾಗಿರುವುದು.
Published on

ಸಂತೋಷ ಮುರಡಿ ಮುಂಡರಗಿ
ಈ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಹಲವು ದಿನಗಳಿಂದ ಸುರಿಯುವ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣ, ಹವಮಾನದಲ್ಲಿನ ಬದಲಾವಣೆಯಿಂದ ವಿವಿಧ ಬೆಳೆಗೆ ರೋಗ ಮತ್ತು ಕೀಟಬಾಧೆ ಆವರಿಸಲಾರಂಭಿಸಿದೆ. ರೈತರಿಗೆ ಬೆಳೆಹಾನಿ ಅನುಭವಿಸುವ ಆತಂಕ ಮನೆ ಮಾಡಿದೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 8,600 ಹೆಕ್ಟೇರ್ ಹೆಸರು, 21,895 ಹೆಕ್ಟೇರ್ ಗೋವಿನಜೋಳ, 4,305 ಹೆಕ್ಟೇರ್ ಶೇಂಗಾ, 625 ಹೆಕ್ಟೇರ್ ಹತ್ತಿ, ಹೀಗೆ… ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ.

ಹೆಸರು ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಂಡಿದ್ದು, ಕಾಯಿಕೊರಕ ಕೀಟ ಆವರಿಸಿದೆ. ಹಳದಿ ರೋಗವು ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸಿಕೊಂಡು ಗಿಡಗಳು ಕುಳ್ಳಗಾಗುತ್ತವೆ. ಹೆಸರು ಬೆಳೆ ಕಾಯಿ ಬಿಡುತ್ತಿದ್ದು, ಕೊಯಿಕೊರಕ ಕೀಟ ಕಾಯಿಗಳನ್ನು ಕೊರೆದು ತಿನ್ನುತ್ತವೆ. ಇದರಿಂದ ಬೆಳೆಹಾನಿಯಾಗಿ ಇಳುವರಿ ಕಡಿಮೆಯಾಗುತ್ತದೆ.

ಗೋವಿನಜೋಳದಲ್ಲಿ ಲದ್ದಿಹುಳು ಕಾಣಿಸುತ್ತಿದೆ. ಈ ಕೀಟ ಹಗಲಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿ ಮಾಡುತ್ತದೆ. ಇವುಗಳ ಸಂಖ್ಯೆ ಹೆಚ್ಚಾದಾಗ ಬೆಳೆಹಾನಿ ಪ್ರಮಾಣ ಹೆಚ್ಚಾಗುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗ ತಿಂದು ಹಾಕುತ್ತದೆ. ಅ್ಲದೆ, ಮೊದಲು ಕಬ್ಬು ಬೆಳೆಯಲ್ಲಿ ಮಾತ್ರ ಬರುತ್ತಿದ್ದ ಪೋಕ್ಕಾ ಬೋಯಿಂಗ ರೋಗ ಈಗ ಗೋವಿನಜೋಳದಲ್ಲಿ ಕಾಣಿಸುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಶೇಂಗಾದಲ್ಲಿ ಸುರುಳಿಪೂಚಿ ಕೀಟ ಕಾಣಿಸುತ್ತಿದ್ದು ಚಿಗುರನ್ನು ಕೊರೆದು ಸುರಂಗ ಮಾಡಿ ಒಳಗಿನ ಹರಿತ್ತನ್ನು ತಿನ್ನುತ್ತದೆ. ಇದರಿಂದ ಬೆಳೆ ಒಣಗಿದಂತೆ ಕಾಣಲಾರಂಭಿಸಿ ಇಳುವರಿ ಕಡಿಮೆಯಾಗುತ್ತದೆ. ಹತ್ತಿ ಬೆಳೆಯು ಹೂವು ಬಿಟ್ಟು ಮೊಗ್ಗು ಕಟ್ಟಲಾರಂಭಿಸಿದ್ದು, ಮಳೆಗೆ ಮೊಗ್ಗು ಉದುರುತ್ತಿದೆ. ಮೆಣಸಿನಕಾಯಿಯಲ್ಲೂ ಮುಟಿರೋಗ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಬೆಳೆ ಇಳುವರಿ ಕುಂಠಿತವಾಗುವ ಆತಂಕ ಶುರುವಾಗಿದೆ. ಬೀಜ, ಗೊಬ್ಬರ, ಕೂಲಿ, ನಿರ್ವಹಣೆ ಸೇರಿ ಪ್ರತಿ ಎಕರೆಗೆ ಸಾವಿರಾರು ರೂ.ಖರ್ಚು ಮಾಡಿ ಕಷ್ಟ ಪಟ್ಟು ಬೆಳೆದ ಬೆಳೆಯು ಕೀಟ, ರೋಗ ಬಾಧೆಗೆ ನಲುಗಲಾರಂಭಿಸುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಹವಮಾನ ವೈಪರೀತ್ಯದಿಂದ ಬೆಳೆಗೆ ರೋಗ, ಕೀಟಬಾಧೆ ಆವರಿಸುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಸಾವಿರಾರು ರೂ.ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯು ಈ ರೀತಿಯಲ್ಲಿ ಹಾನಿಯಾಗುತ್ತಿರುವುದರಿಮದ ಸಂಕಷ್ಟಕ್ಕೆ ದೂಡುತ್ತಿದೆ. ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡಿದ್ದು ನಿಯಂತ್ರಣವಾಗುತ್ತಿಲ್ಲ. ಕೃಷಿ ಅಧಿಕಾರಿಗಳು ಈ ಕುರಿತು ತಕ್ಷಣವೇ ಗಮನ ಹರಿಸಿ ಬೆಳೆಗೆ ತಗುಲುವ ಕೀಟ, ರೋಗ ಬಾಧೆ ನಿವಾರಣೆಗೆ ಮಾರ್ಗೋಪಾಯ ಸೂಚಿಸಬೇಕು.ಮಹಾಂತೇಶ ಮುಗಳಿ, ಯಕ್ಲಾಸಪುರ ರೈತ

ಗೋವಿನಜೋಳ, ಹೆಸರು, ಶೇಂಗಾ ಮೊದಲಾದ ಬೆಳೆಗೆ ತುಗಲುವ ಕೀಟ, ರೋಗಬಾಧೆಯ ಹತೋಟಿಗೆ ಸಂಬಂಧಪಟ್ಟ ಔಷಧಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಮಳೆ, ಮೋಡ ಕವಿದ ವಾತಾವರಣದಿಂದ ಬೆಳೆಯಲ್ಲಿ ಪೋಷಕಾಂಶ ಕೊರತೆಯಾಗುತ್ತಿದೆ. ಹಲವು ಕಡೆ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದ್ದೇನೆ. ಈ ಕುರಿತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಸಮಪರ್ಕ ಮಾಹಿತಿ ನೀಡಲಾಗುತ್ತದೆ. ರೈತರು ಮಾಹಿತಿ ಪಡೆದು ಸಂಬಂಧಪಟ್ಟ ಔಷಧ ಸಿಂಪಡಣೆ ಮಾಡಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತದೆ.ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net