

ಕುಕನೂರು: ಮೆಕ್ಕೆಜೋಳ ಬೆಳೆಗೆ ಗೊಣ್ಣೆಹುಳು ಹಾಗೂ ಹೆಸರು ಬೆಳೆಗೆ ನಂಜಾಣು ರೋಗ, ರಸ ಹೀರುವ ಕೀಟಗಳ ಬಾಧೆಯನ್ನು ಹತೋಟಿಗೆ ತಂದರೆ ಫಸಲು ಕೈಗೆ ಧಕ್ಕಲು ಸಾಧ್ಯ ಎಂದು ಕೊಪ್ಪಳ ಕೃಷಿ ಕೇಂದ್ರದ ವಿಜ್ಞಾನಿ ಎಂ.ಬಿ.ಪಾಟೀಲ್ ಹೇಳಿದರು.
ತಾಲೂಕಿನ ಮಂಗಳೂರಿನಲ್ಲಿ ಕೀಟ ಬಾಧಿತ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಮೆಕ್ಕೆಜೋಳದ ಸಮಗ್ರ ಕೀಟ ನಿಯಂತ್ರಣಕ್ಕಾಗಿ ರೈತರು ಸ್ಥಳೀಯ ರೈತ ಸಂಪರ್ಕದ ಅಧಿಕಾರಿಗಳ ಸಲಹೆ ಪಡೆದು ಇಮಾಮೆಕ್ಟಿನ್ ಬೆಂಜೋಯೇಟ್, ಲ್ಯಾಮ್ಡಾ ಸೈಲೋಥ್ರಿನ್ ಇಂಡಾಕ್ಸಿಕಾರ್ಬ್ ಹಾಗೂ ಸ್ಪೈನೋಸಾಡ್ ಕೀಟನಾಶಕ ಸಿಂಪಡಿಸಬೇಕು ಎಂದರು.
ಕೃಷಿ ವಿಜ್ಞಾನಿ ನಾಗೇಶ ಜಾನೇಕಲ್ ಮಾತನಾಡಿ, ಹೆಸರು ಬೆಳೆಯ ನಂಜಾಣು ರೋಗ ನಿಯಂತ್ರಣಕ್ಕಾಗಿ ಬಾಧಿತ ಗಿಡಗಳನ್ನು ಕಿತ್ತು ಎಸೆಯಬೇಕು. ನಂಜಾಣು ರೋಗದ ವೈರಸ್ ರಸ ಹೀರುವ ಕೀಟಗಳ ಜೊಲ್ಲು ಹಾಗೂ ನಂಜಿನಿಂದ ಬರುತ್ತದೆ. ಇಮಿಡಾಕ್ಲೋಪ್ರಿಡ್, ಥೈಯೋಮೆಥಾಕ್ಸಾಮ್, ಅಸಿಫೇಟ್, ಪೋಲೋ, ಡೈಮಿಥೋಯೇಟ್ ಕೀಟನಾಶಕಗಳನ್ನು ಪ್ರಾರಂಭದ ಹಂತದಲ್ಲೇ ಸಿಂಪಡಿಸಿದರೆ ರಸಹೀರುವ ಕೀಟಗಳು ಹರಡದಂತೆ ತಡೆಗಟ್ಟಬಹುದು ಎಂದರು.
ಗುಳದಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಹನುಮಂತಪ್ಪ ದಾಸನಹಳ್ಳಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಪ್ರತಾಪಗೌಡ, ಗೋಣಿ ಬಸಪ್ಪ, ರೈತರಾದ ಪ್ರಕಾಶ ನೀಲಪ್ಪ ವಕ್ರ, ಶಂಕರಪ್ಪ ಮಂಗಳೂರು, ಡಾ.ಶಿವಶಂಕರ ಹಾಗೂ ಇತರರಿದ್ದರು.