

ಬೆಂಗಳೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಹೇಳಿದ್ದಾರೆ.
ಶನಿವಾರ ನಡೆದ ಪಿಇಎಸ್ ವಿಶ್ವವಿದ್ಯಾನಿಲಯದ ಬಿ.ಟೆಕ್ ಮತ್ತು ಬಿ.ಆರ್ಕ್ ಕೋರ್ಸ್ಗಳ ಪ್ರಥಮ ವರ್ಷದ ತರಗತಿಗಳ ಪ್ರಾರಂಭ ಮತ್ತು ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನದುದ್ದಕ್ಕೂ ಸಮಯಪಾಲನೆ ಮತ್ತು ಶಿಸ್ತನ್ನು ತೋರಿಸಿದ ವಿಶ್ವೇಶ್ವರಯ್ಯನವರಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು. ಸರ್ಎಂವಿ ತಮ್ಮ ವಿನಮ್ರ ಗುಣಗಳು ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮ ಗ್ರಾಮದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ. ಪೋಷಕರು ತಮ್ಮ ಉತ್ಸಾಹವನ್ನು ಮಕ್ಕಳ ಶೈಕ್ಷಣಿಕ ಜೀವನದುದ್ದಕ್ಕೂ ತೋರಿಸಬೇಕೆಂದು ಡಾ.ದೊರೆಸ್ವಾಮಿ ಕರೆ ನೀಡಿದರು. ಪ್ರತಿ ವರ್ಷ 5 ಕೋಟಿ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಿ, ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿಗಳನ್ನು ಉನ್ನತ ಸಾಧನೆ ಮಾಡಲು ಪ್ರೇರೇಪಿಸುವ ಪರಂಪರೆಯನ್ನು ಪಿಇಎಸ್ ಹೊಂದಿದೆ ಎಂದು ಇದೇ ವೇಳೆ ಹೇಳಿದರು.
ಕಾರ್ಯಕ್ರಮದಲ್ಲಿ ಪಿಇಎಸ್ ಹಳೆಯ ವಿದ್ಯಾರ್ಥಿ ಹಾಗೂ ವಿಪ್ರೋ ಅಧ್ಯಕ್ಷ ಹರೀಶ್ ದ್ವಾರಕನಹಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಮಕುಲಾಧಿಪತಿ ಪ್ರೊ.ಡಿ.ಜವಾಹರ್, ಕುಲಪತಿ ಡಾ.ಜೆ.ಸೂರ್ಯ ಪ್ರಸಾದ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೊ.ಅಜೋಯ್ ಕುಮಾರ್, ಸಿಟಿಒ ಡಾ.ಹರ್ಷ ಚತುರ್ವೇದಿ, ವಿವಿಯ ಸಮ ಕುಲಪತಿ ಪ್ರೊ.ನಾಗಾರ್ಜುನ ಸಾದಿನೇನಿ, ಕುಲಸಚಿವ ಡಾ.ಕೆ.ಎಸ್. ಶ್ರೀಧರ್, ವಿಜ್ಞಾನ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥ ಡಾ.ಎಸ್.ರಾಧಾಕೃಷ್ಣನ್ ಉಪಸ್ಥಿತರಿದ್ದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೊ.ಸಿಎನ್ಆರ್ ಮತ್ತು ಪ್ರೊ.ಎಂಆರ್ಡಿ ಮೆರಿಟ್ ವಿದ್ಯಾರ್ಥಿವೇತನವನ್ನು ಗಣ್ಯರು ವಿತರಿಸಿದರು. ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು.