

ಮಂಡ್ಯ: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿರುವ ಪ್ರತಿಷ್ಠಿತ ಜನತಾ ಶಿಕ್ಷಣ ಸಂಸ್ಥೆ(ಪಿಇಟಿ) ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಭಾರತೀಯ ವಾಯುಪಡೆಯ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ(ಎಸ್‌ಡಿಐ)ಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷವಾದ ಅವಕಾಶ ಕಲ್ಪಿಸಿಕೊಟ್ಟಿದೆ.
ಎಸ್‌ಡಿಐ ಭಾರತೀಯ ವಾಯುಪಡೆಯ ತಂತ್ರಜ್ಞಾನವನ್ನು ವೃದ್ಧಿಸಲು ಮತ್ತು ಕಾರ್ಯಾಚರಣೆಯ ಅಗತ್ಯಗಳನ್ನು ಬೆಂಬಲಿಸಲು ಮೀಸಲಾಗಿರುವ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ. ಅಂತೆಯೇ ನಿತ್ಯಸಚಿವ ಕೆ.ವಿ.ಶಂಕರಗೌಡ ದೂರದೃಷ್ಟಿಯಿಂದ ನಿರ್ಮಾಣವಾಗಿರುವ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಸಂಶೋಧನೆ ಮತ್ತು ಸಹಯೋಗದ ಮೂಲಕ ನವೀನತೆಯನ್ನು ಉತ್ತೇಜಿಸುವಲ್ಲಿ ಖ್ಯಾತಿ ಪಡೆದಿರುವ ಶೈಕ್ಷಣಿಕ ಸಂಸ್ಥೆಯಾಗಿದೆ. ಈ ಎರಡು ಸಂಸ್ಥೆಗಳು ಇದೀಗ ಐದು ವರ್ಷದ ಒಪ್ಪಂದ ಮಾಡಿಕೊಂಡಿವೆ.
ಏನಿದು ಒಪ್ಪಂದ?: ಈ ಒಪ್ಪಂದ ಶೈಕ್ಷಣಿಕ ಮತ್ತು ಇಂಜಿನಿಯರಿಂಗ್ ಸಂಶೋಧನೆ ಹಾಗೂ ಅಭಿವೃದ್ಧಿ ಪರಸ್ಪರ ಹೊಂದಾಣಿಕೆಯಲ್ಲಿ ನಡೆಯಲಿದೆ. ಅಂತೆಯೇ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಇಂಟರ್ನ್‌ಶಿಫ್ ಆಧಾರಿತ ಯೋಜನೆಗಳನ್ನು ಕೈಗೊಳ್ಳಬಹುದು. ಈ ಯೋಜನೆ ಕಾಲೇಜಿನ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿದೆ. ಮಾತ್ರವಲ್ಲದೆ ಪ್ರಾಯೋಗಿಕ ಅನುಭವವನ್ನು ಒದಗಿಸುವುದರ ಜತೆಗೆ ವಾಸ್ತವ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೆರವು ನೀಡಲಿದೆ.
ಮುಖ್ಯವಾಗಿ ಭಾರತೀಯ ವಾಯುಪಡೆಯನ್ನು ಅತ್ಯಾಧುನಿಕ ಕೌಶಲ ಮತ್ತು ಜ್ಞಾನದೊಂದಿಗೆ ಸಜ್ಜುಗೊಳಿಸಲು, ಅದರ ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪರಿಹರಿಸಲು ಹಾಗೂ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಸೂಕ್ತವಾದ ತರಬೇತಿ ಕಾರ್ಯಕ್ರಮ ವಿನ್ಯಾಸಗೊಳಿಸಲಾಗುತ್ತದೆ. ಅದರಂತೆ ಉಭಯ ಸಂಸ್ಥೆಗಳು ನವೀನ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳ ಅಭಿವೃದ್ಧಿಯಲ್ಲಿ ಸಹಭಾಗಿತ್ವ ವಹಿಸಲಿವೆ. ಮಾತ್ರವಲ್ಲದೆ ಉದಯೋನ್ಮುಖ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ತಮ್ಮ ಸಂಯೋಜಿತ ಜ್ಞಾನವನ್ನು ಉಪಯೋಗಿಸಲಿದೆ.
ಈ ಹಿನ್ನೆಲೆಯಲ್ಲಿ ಆ.28ರಂದು ಬೆಂಗಳೂರಿನಲ್ಲಿರುವ ಎಸ್‌ಡಿಐ ಸಂಸ್ಥೆಯಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಸ್‌ಐಡಿನ ಹಿರಿಯ ಅಧಿಕಾರಿ ಕೆ.ಎನ್.ಸಂತೋಷ್, ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಡಾ.ನಾಗರತ್ನಾ, ಡಾ.ಎಂ.ಸಿ.ಗಿರೀಶ್‌ಬಾಬು ಇತರರಿದ್ದರು.
ಹಿರಿಯ ಅಧಿಕಾರಿ ಕೆ.ಎನ್.ಸಂತೋಷ್ ಮಾತನಾಡಿ, ಪಿಇಎಸ್ ಕಾಲೇಜಿನೊಂದಿಗೆ ಮಾಡಿಕೊಂಡಿರುವ ಒಪ್ಪಂದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಯೋಜನೆಗಳ ಮೂಲಕ ಸಾಫ್ಟ್‌ವೇರ್ ಅನುಭವ ಪಡೆಯಲು ಅವಕಾಶವನ್ನು ಒದಗಿಸುವ ಗುರಿ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗಲಿದೆ. ಒಟ್ಟಾರೆ ಆತ್ಮನಿರ್ಭರ ಭಾರತ ಮತ್ತು ದೃಷ್ಟಿ 2047ರ ಆಶಯಕ್ಕೆ ಅನುಗುಣವಾಗಿದೆ ಎಂದಿದ್ದಾರೆ.
ಭಾರತೀಯ ವಾಯುಪಡೆಯ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆಯೊಂದಿಗಿನ ಒಪ್ಪಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಹೊಸ ಅವಕಾಶ ಸೃಷ್ಟಿಸಲಿದೆ. ಯೋಜನೆ ಮತ್ತು ಕಸ್ಟಮ್ ತರಬೇತಿ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯೊಂದಿಗಿನ ಸಹಯೋಗ ನಮ್ಮ ಶೈಕ್ಷಣಿಕ ಪರಿಸರವನ್ನು ಶ್ರೀಮಂತಗೊಳಿಸಲಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಅಸಾಧಾರಣವಾದ ಕಲಿಕೆಯ ಅನುಭವವನ್ನು ಒದಗಿಸಲಿದೆ.ಕೆ.ಎಸ್.ವಿಜಯಾನಂದಪಿಇಟಿ ಅಧ್ಯಕ್ಷ