ತಾಂತ್ರಿಕ ಶಿಕ್ಷಣದಲ್ಲಿ ಪಿಇಎಸ್ ಮೈಲಿಗಲ್ಲು: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಿಗಲಿದೆ ವಿಶೇಷ ಸೌಲಭ್ಯ

PES Milestone in Technical Education Mandya
Published on

ಮಂಡ್ಯ: ತಾಂತ್ರಿಕ ಶಿಕ್ಷಣದಲ್ಲಿ ಹಲವು ಹೊಸತನಕ್ಕೆ ನಾಂದಿಯಾಡಿದ ಹೆಗ್ಗಳಿಕೆ ಹೊಂದಿರುವ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಪಿಇಎಸ್ ನೆಕ್ಸ್ಟ್-ಆವಿಷ್ಕಾರ ಮತ್ತು ಸಂವರ್ಧನಾ ಕೇಂದ್ರ ಹಾಗೂ ಎಲೆಕ್ಟ್ರಿಕಲ್ ವಾಹನಗಳ ಉತ್ಕೃಷ್ಟತಾ ಕೇಂದ್ರ ಪ್ರಾರಂಭಿಸಿದೆ.

ಪಿಇಟಿ ಸಂಸ್ಥೆಯ 60ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಎರಡು ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು. ಆವಿಷ್ಕಾರ ಮತ್ತು ಸಂವರ್ಧನಾ ಕೇಂದ್ರವನ್ನು ವಿದ್ಯಾರ್ಥಿಗಳಲ್ಲಿರುವ ಉದ್ಯಮಶೀಲತೆ ಪೋಷಿಸಲು, ಸಂಶೋಧನೆ ಆಧಾರಿತ ಸ್ಟಾರ್ಟ್‌ಅಪ್ ಬೆಂಬಲಿಸಲು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಅಂತರ ಕಡಿಮೆ ಮಾಡಲು ರೂಪಿಸಲಾಗಿದೆ. 9000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕೇಂದ್ರದಲ್ಲಿ 50 ಆಸನಗಳ ಇನ್‌ಕ್ಯುಬೇಶನ್ ಸೌಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿ ಉದ್ಯಮಿಗಳಿಗೆ ಅತ್ಯಾಧುನಿಕ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಹಣಕಾಸು ಬೆಂಬಲವನ್ನು ಒದಗಿಸಲಿದೆ.

ಮುಖ್ಯವಾಗಿ ಮೇಕರ್‌ಸ್ಪೇಸ್ ಪ್ರಯೋಗಾಲಯವನ್ನು ಒಳಗೊಂಡಿದ್ದು, ಸ್ವಯಂ ನಿರ್ಮಾಣ ಸೌಲಭ್ಯವಾಗಿದೆ. ಸಂಶೋಧನೆ ಮೂಲಕ ವಸ್ತುಗಳನ್ನು ತಯಾರಿಸುವವರಿಗೆ, ಹೊಸ ಕೌಶಲ ಕಲಿಯಲು ಬಯಸುವವರಿಗೆಂದು ಪ್ರಾರಂಭಿಸಲಾಗಿದೆ. ಪ್ರಿಂಟರ್, ಸಿಎನ್‌ಸಿ ಯಂತ್ರ, ಐಒಟಿ ಕಿಟ್, ಫಂಕ್ಷನ್ ಜನರೇಟರ್, ಡಿಜಿಟಲ್ ಮಲ್ಟಿಮೀಟರ್‌ಗಳು, ಬೆಂಚ್ ಪವರ್ ಸಪ್ಲೈ, ಸಾಲ್ಡರಿಂಗ್ ಸ್ಟೇಷನ್, ವೆಲ್ಡಿಂಗ್ ಕಿಟ್, ವಿವಿಧ ರೀತಿಯ ಕೈ ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಂತಹ ವೈವಿಧ್ಯಮಯ ತಯಾರಿಕೆ ಮತ್ತು ಪರೀಕ್ಷಾ ಸಾಮರ್ಥ್ಯ ಹೊಂದಿದೆ.

ಇದರೊಟ್ಟಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಕೃಷ್ಟತಾ ಕೇಂದ್ರವನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗಿದೆ. ಇದು 1,400 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿದ್ಯಾರ್ಥಿಗಳು, ಉದ್ಯಮ ವೃತ್ತಿಪರರು ಮತ್ತು ಸ್ಟಾರ್ಟ್‌ಅಪ್‌ಗೆ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ರೂಪಿಸಲಾಗಿದೆ. ಈ ಕೇಂದ್ರವು ಇವಿ ಪವರ್‌ಟ್ರೇನ್ ಡಿಸೈನ್, ಬ್ಯಾಟರಿ ನಿರ್ವಹಣೆ, ಚಾರ್ಜಿಂಗ್ ಮೂಲಸೌಕರ್ಯ ಹೊಂದಿದೆ. ಜತೆಗೆ ಪ್ರಾಯೋಗಿಕ ಮೂಲ ಮಾದರಿ ತಯಾರಿಕೆ, ಪ್ರಯೋಗಾತ್ಮಕ ಸಿದ್ಧತೆಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ತರಬೇತಿ ನೀಡಲಾಗುತ್ತದೆ.

ಆಪಲ್ ಲ್ಯಾಬ್ ಆಕರ್ಷಣೆ: ಎರಡು ಕೇಂದ್ರದ ಜತೆಗೆ ಆಪಲ್ ಲ್ಯಾಬ್ ಕೂಡ ಸ್ಥಾಪಿಸಲಾಗಿದೆ. ಇಲ್ಲಿ ಮ್ಯಾಕ್ ಕಂಪ್ಯೂಟರ್ ಮತ್ತು ಐಒಎಸ್ ಡೆವಲಪ್‌ಮೆಂಟ್ ಉಪಕರಣ ಒದಗಿಸುತ್ತದೆ. ಇದು ವಿದ್ಯಾರ್ಥಿಗಳು ಮತ್ತು ಸ್ಥಳೀಯ ಉದ್ಯಮಿಗಳಿಗೆ ಆ್ಯಪ್ ಡೆವಲಪ್‌ಮೆಂಟ್, ಮಲ್ಟಿಮೀಡಿಯಾ ಡಿಸೈನ್ ಮತ್ತು ಕೋಡಿಂಗ್‌ನಲ್ಲಿ ತರಬೇತಿ ನೀಡಲಾಗುತ್ತಿದೆ.

ಕೆವಿಎಸ್ ದೂರದೃಷ್ಟಿಗೆ ಶ್ಲಾಘನೆ: ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಿಕ್ಷಣ ಕ್ಷೇತ್ರದಲ್ಲಿ ತಾಂತ್ರಿಕ ಶಿಕ್ಷಣವನ್ನು ಮೊದಲಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ನಿತ್ಯಸಚಿವ ಕೆ.ವಿ.ಶಂಕರಗೌಡರ ದೃಷ್ಟಿಕೋನ ಅಪೂರ್ವವಾದದ್ದು. ಅವರ ಈ ಕೊಡುಗೆ ಇಂದಿಗೂ ಮಾದರಿ. ಶಂಕರಗೌಡ ಅವರ ಮಾರ್ಗವನ್ನು ಕೆ.ಎಸ್.ವಿಜಯಾನಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಬೆಂಬಲ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಪಿಇಎಸ್ ಸಂಸ್ಥೆ ಎತ್ತರಕ್ಕೇರುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಇಟಿ ಅಧಕ್ಷ ಕೆ.ಎಸ್.ವಿಜಯಾನಂದ, ಎಲ್ಲ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ಸಮಾಜಕ್ಕೆ ಅಗತ್ಯವಿರುವ ಉತ್ಪನ್ನಗಳನ್ನು ಆವಿಷ್ಕರಿಸಿ. ಇದಕ್ಕೆ ಬೇಕಾದ ಎಲ್ಲ ಸಹಾಯವನ್ನು ನಾವು ಒದಗಿಸುತ್ತೇವೆ ಎಂದರು.

ಬಿಜಿಎಸ್ ಮತ್ತು ಎಸ್‌ಜೆಬಿ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಶೈಕ್ಷಣಿಕ ನಿರ್ದೇಶಕ ಡಾ.ಪುಟ್ಟರಾಜು ಮಾತನಾಡಿ, ಎರಡು ಪ್ರಮುಖ ಕೇಂದ್ರದೊಂದಿಗೆ ಪಿಇಎಸ್ 2.0 ಎಂಬ ಹೊಸ ಯುಗದ ಸಾಕ್ಷಿಯಾಗಿದೆ. ಇದು ಉದ್ಯಮ ಸಂಪರ್ಕಿತ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದರು.

ಪಿಇಟಿ ಸಂಸ್ಥೆ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪಿಇಎಸ್ ಪ್ರಾಂಶುಪಾಲ ಡಾ.ಎನ್.ಎಲ್.ಮುರುಳಿಕೃಷ್ಣ, ಉಪಪ್ರಾಂಶುಪಾಲ ಡಾ.ಎಸ್.ವಿನಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net