ಟೆನಿಸ್, ಫುಟ್ಬಾಲ್‌ನಲ್ಲಿ ಪಿಇಎಸ್ ಚಾಂಪಿಯನ್: ದಾಖಲೆ ಬರೆದ ಪುರುಷ, ಮಹಿಳಾ ತಂಡ

PES Engineering College Champion in tennis and football Mandya
Published on

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂ.11ರಿಂದ 14ರವರೆಗೆ ನಡೆದ ಪುರುಷರ ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸತತ ಮೂರನೇ ಬಾರಿಗೆ ಟ್ರೋಫಿ ತನ್ನಲ್ಲೇ ಉಳಿಸಿಕೊಂಡಿದೆ.
ಅಂತೆಯೇ ರಾಜ್ಯ ಮಟ್ಟದ ಟೆನಿಸ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ವಿ.ಟಿ.ಯು ಅಂತರ ಕಾಲೇಜು ವಲಯ ಹಾಗೂ ರಾಜ್ಯಮಟ್ಟದ ಟೂರ್ನಿ ಆಯೋಜನೆಗೊಂಡಿದ್ದವು. ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನ 22 ಟೆನಿಸ್ ಹಾಗೂ 21 ಫುಟ್ಬಾಲ್ ತಂಡ ಭಾಗವಹಿಸಿದ್ದವು. 600ಕ್ಕೂ ಹೆಚ್ಚಿನ ಆಟಗಾರರು, ತರಬೇತುದಾರರು, ವ್ಯವಸ್ಥಾಪಕರು ಮತ್ತು ತೀರ್ಫುಗಾರರು ಪಾಲ್ಗೊಂಡರು. ಮಹಿಳೆಯರ ವಿಭಾಗದ ರಾಜ್ಯಮಟ್ಟದ ಟೆನಿಸ್‌ನಲ್ಲಿ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ತಂಡ ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜು ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
ಪುರುಷರ ಮೈಸೂರು ವಿಭಾಗದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ತಂಡ ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಇನ್ನು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ಪಿ.ಎ ಇಂಜಿನಿಯರಿಂಗ್ ಕಾಲೇಜು ಪ್ರಥಮ ಹಾಗೂ ಬೆಂಗಳೂರಿನ ಎನ್.ಎಂ.ಐ.ಟಿ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಇನ್ನು ಪುರುಷರ ವಿಭಾಗದ ರೆಸ್ಟ್ ಆ್ ಬೆಂಗಳೂರು ಟೆನಿಸ್ ಪಂದ್ಯಾವಳಿಯಲ್ಲಿ ಮೈಸೂರಿನ ವಿದ್ಯಾವರ್ಧಕ ಕಾಲೇಜು ಪ್ರಥಮ ಹಾಗೂ ಮೈಸೂರಿನ ಎನ್.ಐ.ಇ ಕಾಲೇಜು ದ್ವಿತೀಯ ಸ್ಥಾನ ಬಹುಮಾನ ಗೆದ್ದುಕೊಂಡಿತು. ಅಂತೆಯೇ ರಾಜ್ಯಮಟ್ಟದ ಪುರುಷರ ಟೆನಿಸ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜು ಪ್ರಥಮ ಹಾಗೂ ಬೆಂಗಳೂರು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ಅವರು ತಲಾ 25 ಗ್ರಾಂ ಬೆಳ್ಳಿಪದಕ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ವಿಟಿಯು ಮೈಸೂರು ವಿಭಾಗದ ನಿರ್ದೇಶಕ ಎಂ.ಪಿ.ಮುರಳೀಧರ, ಕ್ರೀಡಾ ಸಮಿತಿ ಸದಸ್ಯ ಸಿ.ಎನ್.ವಿಶ್ವನಾಥ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ರೆಫ್ರೀ ಬೋರ್ಡ್ ಕಾರ್ಯದರ್ಶಿ ಸಂಜಯ್‌ಕುಮಾರ್, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅನಂತಪದ್ಮನಾಭ ಪ್ರಭು, ಸಹಾಯಕಿ ಆರ್.ವಿ.ವಿದ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net