

ಮಂಡ್ಯ: ರಕ್ತದಾನ ಮಹಾದಾನ. ಒಬ್ಬರು ಮಾಡುವ ದಾನದಿಂದ ಮತ್ತೊಬ್ಬರಿಗೆ ಜೀವದಾನವಾಗುತ್ತದೆ ಎಂದು ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ರೆಡ್‌ಕ್ರಾಸ್ ಯುವ ಘಟಕ, ಮಿಮ್ಸ್ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ 20 ವರ್ಷದಿಂದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳು ರಕ್ತದಾನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ತಾತ್ವಿಕ ಭಾವನೆ ನೋಡಿದರೆ ಸಂತೋಷವಾಗುತ್ತದೆ. ರಸ್ತೆ ಅಪಘಾತ, ಗರ್ಭಿಣಿಯರಿಗೆ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ರಕ್ತ ಬೇಕಾಗುತ್ತದೆ. ರಕ್ತಕ್ಕೆ ಪರ್ಯಾಯವಾಗಿ ಬೇರೆ ವಸ್ತು ಬಂದಿಲ್ಲ ಆದ್ದರಿಂದ ರಕ್ತದಾನ ತುಂಬಾ ಜನರಿಗೆ ಉಪಯೋಗವಾಗುತ್ತದೆ ಎಂದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ಮಾತನಾಡಿ, ಯಾರೇ ತೊಂದರೆಯಲ್ಲಿರುವವರಿಗೆ ರಕ್ತ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಪ್ರತಿ ವರ್ಷ 300 ರಿಂದ 400 ಜನ ವಿದ್ಯಾರ್ಥಿಗಳು ರಕ್ತದಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು, ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಕ್ರಮಾಧಿಕಾರಿ ಡಾ.ಬಿ.ಷಣ್ಮುಖ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ.ವೇಣು, ಮಿಮ್ಸ್‌ನ ರಫೀಕ್, ವಿದ್ಯಾರ್ಥಿ ಮುಖಂಡ ಸಾಗರ್ ಇತರರಿದ್ದರು. ಇದೇ ವೇಳೆ 376 ಯೂನಿಟ್ ರಕ್ತಸಂಗ್ರಹಿಸಿ ಮಿಮ್ಸ್‌ಗೆ ಹಸ್ತಾಂತರಿಸಲಾಯಿತು.