ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್‌ನಿಂದ ‘ಎ’ ಮಾನ್ಯತೆ: ಮೂಲ ಸೌಕರ್ಯ, ಕಾರ್ಯಕ್ಷಮತೆ ಆಧಾರದಲ್ಲಿ ಆಯ್ಕೆ

PES Engineering College A Grade Accreditation by NAAC Mandya
Published on

ಮಂಡ್ಯ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್(ನ್ಯಾಕ್) ‘ಎ’ ದರ್ಜೆಯ ಮಾನ್ಯತೆ ನೀಡಿದೆ. ಸಂಸ್ಥೆಯ ಶೈಕ್ಷಣಿಕ ಶ್ರೇಷ್ಟತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ನಿರಂತರ ಬದ್ಧತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ನ್ಯಾಕ್ ಮಾನ್ಯತೆ ಪ್ರಕ್ರಿಯೆ ಕಠಿಣವಾಗಿರಲಿದೆ. ಸಂಸ್ಥೆಯ ಮೂಲ ಸೌಕರ್ಯ, ಪ್ರಾಧ್ಯಾಪಕರ ಕಾರ್ಯದಕ್ಷತೆ, ಗುಣಮಟ್ಟದ ಬೋಧನಾ ವಿಧಾನ, ಸಂಶೋಧನಾ ಪ್ರಗತಿ, ವಿದ್ಯಾರ್ಥಿಗಳ ಪ್ರತಿಭೆ, ಕಾಲೇಜಿನ ವೈಶಿಷ್ಟತೆ ಮತ್ತು ಒಟ್ಟಾರೆ ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮಾನ್ಯತೆ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ನಮ್ಮ ಸಂಸ್ಥೆಗೆ ಬಿ++ ಮ್ಯಾನತೆ ಸಿಕ್ಕಿತ್ತು. ಈ ಬಾರಿ ಎ ದರ್ಜೆಯ ಮಾನ್ಯತೆ ನೀಡಿದೆ. ಇದು ಸಂಸ್ಥೆಯ ಶೈಕ್ಷಣಿಕ ಶ್ರೇಷ್ಟತೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ತೋರಿಸುತ್ತದೆ ಎಂದರು.

ಸಂಸ್ಥೆಯ ಸಂಸ್ಥಾಪಕ ನಿತ್ಯಸಚಿವ ಕೆ.ವಿ.ಶಂಕರಗೌಡ, ಮಾಜಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ ಅವರ ದೂರದೃಷ್ಟಿ ಹಾಗೂ ಹಾಲಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರ ಕ್ರಿಯಾಶೀಲ ನಾಯಕತ್ವ ಸಂಸ್ಥೆಯ ಸಾಧನೆಯ ಪ್ರಯಾಣದಲ್ಲಿ ಪ್ರಮುಖವಾಗಿದೆ. ಅವರ ಮಾರ್ಗದರ್ಶನ, ಅನುಕೂಲಕರ ಕಲಿಕೆಯ ವಾತಾವರಣ ನಿರ್ಮಾಣ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿರುವುದರ ಪರಿಣಾಮ ಸಂಸ್ಥೆ ಯಶಸ್ವಿಯಾಗಲು ಕಾರಣವಾಗಿದೆ ಎಂದು ಹೇಳಿದರು.

ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಮಾತನಾಡಿ, ಪಿಇಎಸ್ ರಾಷ್ಟ್ರಮಟ್ಟದಲ್ಲಿ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿನ ಸಾಧನೆಯ ಹಿಂದೆ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರ ಸಹಕಾರ ಪ್ರಮುಖವಾಗಿದೆ. ಆದ್ದರಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂಸ್ಥೆಯ ಐಕ್ಯೂಎಸಿ ಸಂಯೋಜಕಿ ಡಾ.ಎಂ.ಎನ್.ವೀಣಾ, ಮಾಧ್ಯಮ ಮತ್ತು ಪ್ರಚಾರಾಧಿಕಾರಿ ಡಾ.ಕೋದಂಡರಾಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net