

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜ.7ರಂದು 13ನೇ ವರ್ಷದ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.
ಜಿಲ್ಲೆಯ ರೈತರ ಸಹಕಾರದಿಂದ ಹಾಗೂ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ದೂರದೃಷ್ಟಿಯೊಂದಿಗೆ ನಗರದಲ್ಲಿ 1962ರಲ್ಲಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿತವಾಯಿತು. ಅಂದಿನಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ. 2008ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಸ್ವಾಯತತ್ತೆ ಪಡೆದಿದೆ. ಮಾತ್ರವಲ್ಲದೆ 2022ರಲ್ಲಿ ಭಾರತೀಯ ಶ್ರೇಯಾಂಕದ ಎನ್‌ಐಆರ್‌ಎಫ್ ನಿಂದ 137ನೇ ರ‌್ಯಾಂಕ್ ಪಡೆದುಕೊಂಡಿದೆ. 2012-13ರಲ್ಲಿ ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವರ್ಷ ಯುಜಿ 711 ಹಾಗೂ ಪಿಜಿ 151 ಸೇರಿದಂತೆ 862 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 8 ಯುಜಿ ಹಾಗೂ 6 ಪಿಜಿ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ವಹಿಸಲಿದ್ದಾರೆ. ವಿಷನ್ ಗ್ರೂಪ್ ಫಾರ್ ಸ್ಟಾರ್ಟ್ ಅಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಡೀನ್(ಶೈಕ್ಷಣಿಕ) ಡಾ.ಆರ್.ಗಿರೀಶ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರಬಾಬು, ತರಬೇತಿ ಮತ್ತು ಉದ್ಯೋಗ ಕೇಂದ್ರದ ಅಧಿಕಾರಿ ಡಾ.ಎಸ್.ವಿನಯ್, ಉಪಡೀನ್(ಶೈಕ್ಷಣಿಕ) ಡಾ.ಡಿ.ಆರ್.ಉಮೇಶ್, ಉಪಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಇದ್ದರು.