

ಮಂಡ್ಯ: ಆಧುನಿಕತೆ ಹೆಚ್ಚಾಗುತ್ತಿರುವ ದಿನಗಳಲ್ಲಿ ಜಾನಪದ ವಿನಾಶದಂಚಿನಲ್ಲಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಬೇಸರ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಜಾನಪದ ವಿಭಾಗ, ಸಾಂಸ್ಕೃತಿಕ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ವಿಶ್ವ ಜಾನಪದ ಮತ್ತು ಪಾರಂಪರಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಸಮುದಾಯವು ಜಾನಪದವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕಿದೆ. ಆಧುನಿಕತೆಯ ಭರಾಟೆಯಲ್ಲಿರುವ ಇಂದಿನ ಯುವಜನತೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕಿದೆ. ನಮ್ಮ ತಾತ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರು, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಆಧ್ಯತೆ ನೀಡುತ್ತಿದ್ದರು. ಶೈಕ್ಷಣಿಕ ಕ್ಷೇತ್ರವನ್ನು ಉತ್ತುಂಗಕ್ಕೇರಿಸಲು ಅವರು ಪಟ್ಟ ಶ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ಮರಿಸಿದರು.
ಪ್ರಾಂಶುಪಾಲ ಡಾ.ಜೆ.ಮಹದೇವು ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ನಾಯಕತ್ವ ಗುಣವನ್ನು ಹೆಚ್ಚಿಸುತ್ತದೆ. ಸಮಾಜಮುಖಿಯಾಗಿ ರೂಪುಗೊಳ್ಳಲು ಪ್ರೇರಣೆ ನೀಡುತ್ತದೆ. ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾ ಪ್ರಪಂಚದ ವಿಧ್ಯಾಮಾನದಲ್ಲಿ ವಿದ್ಯೆ ಕಲೆಯುತ್ತಿದ್ದೀರಿ. ಶಿಸ್ತು ಮತ್ತು ಸಂಸ್ಕಾರಗಳು ಸಾಧನೆಗೆ ಉತ್ತೇಜನವಾಗಿವೆ ಎಂದರು.
ಜಾನಪದ ವಿಭಾಗದ ಮುಖ್ಯಸ್ಥ ಪ್ರೊ.ಮರಿಯಪ್ಪ, ಸಾಂಸ್ಕೃತಿಕ ವಿಭಾಗ ಮುಖ್ಯಸ್ಥ ಪ್ರೊ.ವೀರೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಮಹಾದ್ವಾರದಿಂದ ಸ್ವಾಮಿ ವಿವೇಕಾನಂದ ರಂಗಮಅದಿರದ ವರಗೆ ಜಾನಪದ ಮೇಳದೊಂದಿಗೆ ಮೆರವಣೆಗೆ ನಡೆಯಿತು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸಾಂಪ್ರದಾಯ ಉಡುಗೆ-ತೊಡುಗೆ ತೊಟ್ಟು ಸಂಭ್ರಮಿಸಿದರು.