ಸಮಾಜದಲ್ಲಿ ‘ಸಂಸ್ಕೃತಿ’ಯ ಬದಲಿಗೆ ‘ವಿಕೃತಿ’ ಮೆರೆಯುತ್ತಿದೆ: ಡಾ.ಸಿ.ಪಿ. ಕೃಷ್ಣಕುಮಾರ್

9
Published on

ಪ್ರಸ್ತುತ ಸಮಾಜದಲ್ಲಿ ‘ಸಂಸ್ಕೃತಿ’ಯ ಬದಲಿಗೆ ‘ವಿಕೃತಿ’ ಮೆರೆಯುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಬದುಕಿನ ಉನ್ನತೀಕರಣ ಅನಿವಾರ್ಯವಾಗಿದೆ. ಅದಕ್ಕಾಗಿ ಜನರ ಬದುಕು ‘ಸಂಸ್ಕೃತೀಕರಣ’ಗೊಳ್ಳಬೇಕಾದ ಅಗತ್ಯವಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ನುಡಿದರು.

ಚೇತನ ಫೌಂಡೇಷನ್ ಕರ್ನಾಟಕದ ಸಾರಥ್ಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಮೈಸೂರು ನುಡಿ ಸಡಗರ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆಯ ಕಾಲದವಿದು. ಈಗ ಬದುಕು ನೀರಸ ಮತ್ತು ನಿಸ್ತೇಜವಾಗುತ್ತಿದೆ. ಸೃಜನಶೀಲತೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತೀಕರಣಗೊಳ್ಳಬೇಕಾದ ಅಗತ್ಯವಿದೆ. ‘ಸಂಸ್ಕೃತಿ’ಯು ವ್ಯಾಪಕಾರ್ಥ ಹೊಂದಿದೆ. ಅದರ ಪರಿಧಿಯಲ್ಲಿ ಕಲೆ, ಕಾವ್ಯ, ಅಧ್ಯಾತ್ಮ, ಧರ್ಮ ಎಲ್ಲ ಸಮಾವೇಶಗೊಳ್ಳುತ್ತದೆ. ಇವು ಪೂರ್ಣ ಮಾನವನ ನಿರ್ಮಾಣ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ನಾಡು-ಕಾಡುಗಳ ಸಮನ್ವಯಗೊಳಿಸಿದ ಮಾಂತ್ರಿಕ ಕವಿ ಕುವೆಂಪು. ಆದರೆ, ಇಂದು ಕಾಡನ್ನು ಕಳೆದುಕೊಂಡಿದ್ದೇವೆ. ಪರಿಸರಕ್ಕೆ ದೂರವಾಗಿದ್ದೇವೆ. ಪರಿಸರ ಯಾವತ್ತಿಗೂ ನಮ್ಮ ಜೀವಾಧಾರ. ಅದನ್ನು ನಾವು ಪರಿಪೋಷಿಸಬೇಕು. ಇದು ಸಂಸ್ಕೃತಿಯ ಗುರುತರ ಕಾರ್ಯ ಮತ್ತು ಕರ್ತವ್ಯವೂ ಹೌದು. ಕಲೆ ಮತ್ತು ಕಾವ್ಯಗಳ ನುಡಿ ಸಡಗರ ಈ ದಿಶೆಯಲ್ಲಿ ದುಡಿಯಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸ್ಪರ್ಧೆಗಾಗಿ, ಬಹುಮಾನಕ್ಕಾಗಿ, ಪ್ರಶಸ್ತಿಗಾಗಿ ಬರೆಯುವ ಪ್ರವೃತ್ತಿ ಕವಿಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದಾಗಿ ಕವಿಗಳ ಸೃಜನಶೀಲ ಅಭಿವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮುತ್ತಿಲ್ಲ. ಇದರಿಂದಾಗಿ ಸಾಹಿತ್ಯದಲ್ಲಿ ಸಹಜತೆಗಿಂತ ಕೃತಕತೆಯ ಗುಣ ಎದ್ದು ಕಾಣುತ್ತದೆ ಎಂದರು.

ಸಾಹಿತ್ಯ ಕೃಷಿ ಯಾವಾಗಲೂ ಆತ್ಮತೃಪ್ತಿ ಮತ್ತು ವಿಕಾಸಕ್ಕಾಗಿ ನಡೆಯಬೇಕು. ಜೊತೆಗೆ ಸಮಾಜದ ತಲ್ಲಣಗಳಿಗೆ ದನಿಯಾಗಬೇಕು. ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಿಬೇಕು. ಸಾಮಾಜಿಕ ಸಂದೇಶವನ್ನೂ ನೀಡುವ ಮೂಲಕ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಈ ದಿಕ್ಕಿನಲ್ಲಿ ಕವಿಗಳ ಚಲನೆ ಇರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ಶಿವಣ್ಣ, ಚೇತನ ಫೌಂಡೇಷನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಸಾಹಿತಿ ಸುರೇಶ್ ಕೋರಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ.ಮೈಸೂರು ಉಮೇಶ್ ‘ಮೈಸೂರಿನ ಶಿಕ್ಷಣ, ಸಾಹಿತ್ಯ, ಜನಪದ ಮತ್ತು ಸಂಸ್ಕೃತಿ’ ಎಂಬ ವಿಷಯ ಕುರಿತು ಹಾಗೂ ಹಿರಿಯ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ‘ಮೈಸೂರಿನ ರಂಗಭೂಮಿ, ಸಂಗೀತ, ಸಂಘಟನೆ ಮತ್ತು ಚಳವಳಿಗಳು’ ಎಂಬ ವಿಷಯ ಕುರಿತು ವಿಚಾರ ಮಂಡನೆ ಮಾಡಿದರು.

ಬಳಿಕ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯೂನಿವರ್ಸಲ್ ಅಕಾಡೆಮಿಯ ಅಧ್ಯಕ್ಷ ಹಾಗೂ ಕವಿ ಪ್ರಕಾಶ್ ಜಿ.ಎಸ್. ಹಳ್ಳಿ ವಹಿಸಿದ್ದರು. ಮಂಗಳೂರಿನ ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್ ಆಶಯ ನುಡಿಗಳನ್ನಾಡಿದರು. ನಾಡಿನ ವಿವಿಧ ಜಿಲ್ಲೆಗಳ 16 ಮಂದಿ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕುವೆಂಪು ನುಡಿಸಿರಿ ಪ್ರಶಸ್ತಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನ ಪ್ರಶಸ್ತಿ, ಡಾ. ವಿಷ್ಣುವರ್ಧನ್ ನೆನಪಿನ ಕನ್ನಡ ಮಾಣಿಕ್ಯ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net