ಕಡಿದಾದ ತಿರುವಲ್ಲಿ ಸಂಚಾರ ‘ಡೇಂಜರ್’ ACCIDENT

ಭಾನುವಾರ ರಾತ್ರಿ ಪೆರುವಾಯಿ ಸೇತುವೆಯಿಂದ ಕೆಳಗೆ ಬಿದ್ದಿರುವ ಕಾರು.
ಭಾನುವಾರ ರಾತ್ರಿ ಪೆರುವಾಯಿ ಸೇತುವೆಯಿಂದ ಕೆಳಗೆ ಬಿದ್ದಿರುವ ಕಾರು.
Published on

ಪ್ರಮುಖ ಮುಖ್ಯಾಂಶಗಳು

  • ಪೆರುವಾಯಿ-ಬೆರಿಪದವು ರಸ್ತೆಯಲ್ಲಿ ವಾಹನಗಳ ಅಪಘಾತ
  • ಬೋರ್ಡ್ ಅಳವಡಿಸದೆ ಬೇಜವಾಬ್ದಾರಿ
ವಿಟ್ಲ: ಕಡಿದಾದ ತಿರುವಿನಲ್ಲಿ ೬೦ ವರ್ಷದ ಹಿಂದೆ ನಿರ್ಮಿಸಲಾದ ಕಿರಿದಾದ ಸೇತುವೆಯಲ್ಲಿ ನಿತ್ಯವೂ ಜನರು ಜೀವ ಭಯದಲ್ಲೇ ಸಂಚರಿಸುವಂತಹ ಸ್ಥಿತಿಯಿದೆ. ತಿರುವಿನ ಬಗ್ಗೆ ಸರಿಯಾದ ಸೂಚನಾ ಫಲಕ ಹಾಗೂ ಅಪಾಯ ಸೂಚಕ ಫಲಕಗಳನ್ನು ಅಳವಡಿಸದ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ನಿರಂತರ ಅಪಘಾತಕ್ಕೆ ಕಾರಣವಾಗುತ್ತಿದೆ. ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವುದರಿಂದ ವಾಹನಗಳು ನಿಯಂತ್ರಣ ತಪ್ಪಿದಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಕುದ್ದುಪದವು-ಬಾಯಾರು ಅಂತಾರಾಜ್ಯ ಸಂಪರ್ಕ ರಸ್ತೆಯ ಪೆರುವಾಯಿ-ಬೆರಿಪದವು ನಡುವಿನ ರಸ್ತೆ ಇನ್ನೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೇ ಇದ್ದು, ಅಭಿವೃದ್ಧಿ ಕಂಡಿಲ್ಲ. ಪೆರುವಾಯಿ ಕಡೆಯಿಂದ ಇಳಿಜಾರು ಭಾಗದಲ್ಲಿ ತಿರುವಿನಲ್ಲಿ ಸೇತುವೆ ಇದೆ. ಇದರ ಅರಿವಾಗದೆ ವಾಹನಗಳು ನೇರವಾಗಿ ಹೋಗಿ ಹೊಳೆಗೆ ಇಳಿಯುತ್ತಿವೆ.
ಮಳೆಗಾಲದಲ್ಲಿ ಅಪಾಯ ಸಾಧ್ಯತೆ: ಮಳೆಗಾಲದಲ್ಲಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತದೆ. ಈಗ ನಡೆದಂತೆ ಅಪಘಾತಗಳು ನಡೆದರೆ, ನೀರಿನ ಹರಿವಿಗೆ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಇದರ ಜತೆಗೆ ಘಟನೆ ನಡೆದ ಮಾಹಿತಿ ಸಿಗುವುದು ಕಷ್ಟ. ಅಧಿಕಾರಿಗಳು ನಿರ್ಲಕ್ಷ್ಯ ತೊರೆದು ಮಾಹಿತಿ -ಲಕ ಅಳವಡಿಸಬೇಕು. ಹದಿನೈದು ದಿನದ ಅಂತರದಲ್ಲಿ ನದಿಗೆ ಎರಡು ವಾಹನಗಳು ಬಿದ್ದಿದ್ದು, ತುರ್ತು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಭಾನುವಾರ ರಾತ್ರಿ ಕಾರು ಅಪಘಾತ: ಪೆರುವಾಯಿ ಕಡೆಯಿಂದ ಕೇರಳದ ಕಡೆಗೆ ಸಾಗುತ್ತಿದ್ದ ಕಾರು ತಿರುವಿನ ಮಾಹಿತಿ ಲಭಿಸದೆ, ಹೊಳೆಗೆ ನುಗ್ಗಿ ಅಪಘಾತವಾಗಿದೆ. ಕೇರಳ ಮೂಲದ ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ರಾತ್ರಿ ೧೧.೩೦ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಮಾಹಿತಿ ತಿಳಿದು, ಕಾರಿನಲ್ಲಿದ್ದವರನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಮೇ ೩೧ರಂದು ಪಿಕಪ್ ಅಪಘಾತವಾಗಿ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದಿತ್ತು.

ಪ್ರಸ್ತಾವನೆ ಸಲ್ಲಿಕೆ

ಪೆರುವಾಯಿ-ಬೆರಿಪದವು ಕರ್ನಾಟಕದ ಗಡಿ ಭಾಗದ ರಸ್ತೆಯಾಗಿದ್ದು, ವಾಹನ ಸಂಚಾರ ಅಽಕವಿದ್ದರೂ, ಇನ್ನೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಲ್ಲೇ ಇದೆ. ಸಾರ್ವಜನಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿದ ಶಾಸಕ ಅಶೋಕ್ ಕುಮಾರ್ ರೈ ಒನ್ ಟೈಮ್ ಸೆಟಲ್ಮೆಂಟ್ ಅಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಂತೆ ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಅಂದಾಜು ಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ವಿಜಯವಾಣಿ ನಿರಂತರ ವರದಿ

ಪೆರುವಾಯಿ ಹೊಳೆಗೆ ಇರುವ ಕಿರಿದಾದ ಸೇತುವೆ ಸಮಸ್ಯೆಯ ಬಗ್ಗೆ ವಿಜಯವಾಣಿ ನಿರಂತರವಾಗಿ ವರದಿ ಪ್ರಕಟಿಸಿದೆ. ೨೦೨೩ರಲ್ಲಿ ಮಾಣಿಲದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ತುರ್ತು ಕ್ರಮಕ್ಕೆ ಸೂಚಿಸಿದರೂ, ಅಗತ್ಯ ವ್ಯವಸ್ಥೆಯಾಗಿಲ್ಲ. ೨೦೨೫ ನ.೪ರಂದು ಗಡಿ ಪ್ರದೇಶಕ್ಕೆ ಸೇತುವೆ ಗಗನ ಕುಸುಮ ವರದಿಯನ್ನು ಪ್ರಕಟಿಸಿತ್ತು.
"

ಸಮಸ್ಯೆಗಳು ಮನವಿ ಸಲ್ಲಿಸುವ ಹಂತದಲ್ಲೇ ಕೊನೆಯಾಗುತ್ತಿವೆ. ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಜನ ಸಾಮಾನ್ಯರ ಜೀವ ಯಾರೊಬ್ಬರಿಗೂ ಮುಖ್ಯವಾಗದಿರುವುದು ದುರಂತವಾಗಿದೆ.

— ಪದ್ಮನಾಭ, ವಾಹನ ಸವಾರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net