ಕೃಷಿ ನೀತಿ ಹಿಂಪಡೆಯಲು ಸರ್ಕಾರದ ಮನವೊಲಿಸಿ; ಸಂಸದ ರಮೇಶ ಜಿಗಜಿಣಗಿಗೆ ರೈತರ ಮನವಿ

REQUEST LETTER TO MP
ವಿಜಯಪುರದ ಸಂಸದರ ಕಚೇರಿಯಲ್ಲಿ ವಿವಿಧ ರೈತ-ಕಾರ್ಮಿಕ ಪರ ಸಂಘಟನೆಗಳ ಮುಖಂಡರು ಸಂಸದ ರಮೇಶ ಜಿಗಜಿಣಗಿಗೆ ಮನವಿ ಸಲ್ಲಿಸಿದರು. ಮಲ್ಲಿಕಾರ್ಜುನ ಎಚ್.ಟಿ, ಲಕ್ಷ್ಮಣ ಹಂದ್ರಾಳ, ಜಿ.ಜಿ. ಗಾಂಧಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕರಾಳ ಕೃಷಿ ನೀತಿ ಮತ್ತು ಕಾರ್ಮಿಕ ಕೋಡ್ ಹಿಂಪಡೆಯುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಗರದ ಹಳೆಯ ಪ್ರವಾಸಿ ಮಂದಿರದಲ್ಲಿರುವ ಸಂಸದ ಕಚೇರಿಯಲ್ಲಿ ಶನಿವಾರ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿದ ಪ್ರಾಂತ ರೈತ ಸಂಘಟನೆ, ಅಖಿಲ ಭಾರತ ಕೃಷಿಯೇತರ ಮಜದೂರ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್ ಯೂನಿಯನ್ ಮತ್ತು ಎಐಡಿವೈಒ, ಎಐಎಂಎಸ್‌ಎಸ್ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಮುಖಂಡರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಕರಾಳ ಕೃಷಿ ನೀತಿ ಹಿಂಪಡೆಯಲು ಆಗ್ರಹಿಸಿ ರೈತರು ಸುದೀರ್ಘ ಹೋರಾಟ ನಡೆಸಿದರು. ಸುಮಾರು 736 ರೈತರು ಹುತಾತ್ಮರಾದರು. ಲಕ್ಷಾಂತರ ರೈತರು ಕಷ್ಟ-ನಷ್ಟಗಳನ್ನು ಅನುಭವಿಸಿದರು. ಆದರೂ ಸಮಸ್ಯೆ ಬಗೆ ಹರಿದಿಲ್ಲ. ಈ ಬಗ್ಗೆ ಸಂಸದರು ಸರ್ಕಾರದ ಗಮನ ಸೆಳೆದರು ರೈತ ನೀತಿ ಹಿಂಪಡೆಯುವಂತೆ ಮನವೊಲಿಸಬೇಕೆಂದು ಮನವಿ ಮಾಡಿದರು.

ಭಾರತದ ದುಡಿವ ಜನತೆ ಮಿತಿಮೀರಿದ ಸಾಲದ ಶೂಲಕ್ಕೆ ಸಿಲುಕಿದೆ. ನಿರುದ್ಯೋಗ, ಬೆಲೆಯೇರಿಕೆಯಂತಹ ತೀವ್ರವಾದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಪ್ರತಿನಿತ್ಯ ಸರಾಸರಿ 31 ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳವಾದ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು, ಗ್ರಾಮೀಣದಿಂದ ಪಟ್ಟಣಗಳಿಗೆ ಸಂಕಷ್ಟ ವಲಸೆ ಹಾಗೂ ಆದಾಯ ಮತ್ತು ಸಂಪತ್ತಿನ ಹೆಚ್ಚುತ್ತಿರುವ ಅಸಮಾನತೆ ಇವುಗಳ ಪರಿಹಾರಕ್ಕೆ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ. ಆದಕಾರಣ, ಕಾರ್ಪೊರೇಟ್ ಪರ ನೀತಿಗಳಲ್ಲಿ ಮಾರ್ಪಾಡು, 2021 ಡಿ.9ರ ಒಡಂಬಡಿಕೆಯ ಅನುಷ್ಠಾನ ಹಾಗೂ ಇನ್ನಿತರ ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟವನ್ನು ಪುನರಾರಂಭಿಸಲು ಎಸ್‌ಕೆಎಂ ನಿರ್ಧರಿಸಿದೆ. ರೈತರು ಮತ್ತು ಕೃಷಿ ಕಾರ್ಮಿಕರಾದ ನಮ್ಮೊಂದಿಗೆ ಬೆಂಬಲವಾಗಿ ನಿಂತು, ದೀರ್ಘ ಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿ ಮತ್ತು ಕ್ಯಾಬಿನೆಟ್ಟಿನ ಮೇಲೆ ಒತ್ತಡ ತರಬೇಕೆಂದು ವಿನಂತಿಸಿದರು.

ಮನವಿ ಸ್ವೀಕರಿಸಿದ ಸಂಸದ ರಮೇಶ ಜಿಗಜಿಣಗಿ ಅವರು, ಅಧಿವೇಶನದಲ್ಲಿ ಲಿಖಿತವಾಗಿ ಪ್ರಶ್ನೆ ಕೇಳುವದಾಗಿ ಭರವಸೆ ನೀಡಿದರು.
ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ, ಲಕ್ಷ್ಮಣ ಹಂದ್ರಾಳ, ಜಿ.ಜಿ. ಗಾಂಧಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ, ಶಿವಬಾಳಮ್ಮ ಕೊಂಡಗೂಳಿ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಅಶ್ವಿನಿ ತಳವಾರ, ಶೋಭಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net