

ಲಿಂಗಸುಗೂರು: ಹನ್ನೆರಡನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆ ಕೊಟ್ಟವರು ಬಸವಣ್ಣನವರು. ಶರಣರ ತತ್ವಗಳು ಮಹಿಳೆಯರಿಗೆ ಸಮಾನತೆ ಸಾರಿವೆ. ಆದ್ದರಿಂದ ಬಸವಣ್ಣನವರಿಗೆ ಮಹಿಳೆಯರು ಚಿರಋಣಿಯಾಗಿರಬೇಕು ಎಂದು ಚಳ್ಳಕೆರೆ ಬಸವ ತತ್ವ ಚಿಂತಕಿ ಡಾ.ಶಬ್ರಿನಾ ಮಹ್ಮದ್ ಅಲಿ ಹೇಳಿದರು.
ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವದ ಮಹಿಳಾ ಗೋಷ್ಠಿಯಲ್ಲಿ ಶನಿವಾರ ಅನುಭವ ನೀಡಿದರು.
ಜನರಲ್ಲಿ ಮೌಢ್ಯತೆ ತುಂಬುವ ಜನರಿಂದ ಮೋಸ ಹೋದ ಬಿಜ್ಜಳನು ಶರಣ ತತ್ವಕ್ಕೆ ಕಲ್ಲೆಸೆಯುವ ಕೆಲಸ ಮಾಡಿದರು. ಶರಣ ತತ್ವಗಳು ಬಸವ ಕಲ್ಯಾಣದಲ್ಲಿ ನಿರಂತರ ನಡೆಯುತ್ತಿದ್ದರೆ ಇಂದು ನಮ್ಮ ಕನ್ನಡ ನಾಡು ಸ್ವರ್ಗವಾಗಿರುತ್ತಿತ್ತು. ಕಟ್ಟ ಕಡೆಯ ಜನರನ್ನು ಕರೆದುಕೊಂಡು ಸಮಾನತೆ ಸಾರಿದವರು ಬಸವಣ್ಣನವರು. ಶರಣ ತತ್ವದಲ್ಲಿ ದೇವರಿಗೆ ಆಕಾರವಿಲ್ಲ. ಇಷ್ಟ ಲಿಂಗ ಮೂಲಕ ದೇವರನ್ನು ಕಾಣಬೇಕು. ದೇವರಿಗೆ ದೇಹವಿಲ್ಲ, ವರ್ಣವಿಲ್ಲ, ರೂಪವಿಲ್ಲ, ನಿರಾಕಾರವಾಗಿರುವ ಚೈತನ್ಯಾತ್ಮಕ ಶಿವನನ್ನು ಪೂಜಿಸಬೇಕು. ಶರಣರ ತತ್ವಗಳನ್ನು ಮಹಿಳೆಯರು ಮಕ್ಕಳಿಗೆ ತಲುಪಿಸುವ ಕೆಲಸ ಮಾಡಬೇಕು. ಅರಿವಿನ ಮಾರ್ಗದತ್ತ ಹೋಗಲು ಶರಣರ ತತ್ವಗಳು ಅವಕಾಶ ಮಾಡಿಕೊಡುತ್ತವೆ. ಸಂವಿಧಾನಕ್ಕೆ ಸಮನಾದ ಸಮಾನತೆ ಅಂಶಗಳು ಬಸವಣ್ಣನವರ ವಚನಗಳು ಹೊಂದಿವೆ. ಶರಣರ ವಚನಗಳು ನಮ್ಮ ವ್ಯಕ್ತಿತ್ವವನ್ನು ಉಜ್ಜಲಗೊಳಿಸುತ್ತವೆ ಎಂದರು.
ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ್ ಸತ್ಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ, ಧಾರವಾಡ ಮುಖ್ಯ ಅಭಿಯಂತರ ಶಿವಾನಂದ ನಾಯಕ, ಅಮರಪ್ಪ ಸಕ್ರಿ ಇತರರಿದ್ದರು.