ವ್ಯಕ್ತಿತ್ವ ರೂಪಿಸುವ ಮೌಲ್ಯಯುತ ಶಿಕ್ಷಣ ಅಗತ್ಯ

24 CRP 01 (2)
Published on

ಚನ್ನರಾಯಪಟ್ಟಣ: ಹೆಚ್ಚು ಅಂಕ ಗಳಿಕೆಯ ಶಿಕ್ಷಣಕ್ಕೆ ಆದ್ಯತೆ ನೀಡುವ ಪಾಲಕರು ತಮ್ಮ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮುಂದಾಗುವುದಿಲ್ಲ. ವ್ಯಕ್ತಿತ್ವ ರೂಪಿಸುವಂತಹ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಹೇಳಿದರು.

ಪಟ್ಟಣದ ಜ್ಞಾನಸಾಗರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಸೇವಾ ಮಹಾ ಸಂಗಮದಲ್ಲಿ ಮಾತನಾಡಿದರು.

ಮಕ್ಕಳನ್ನು ಕೇವಲ ಅಂಕ ಗಳಿಕೆಗೆ ಸೀಮಿತ ಮಾಡದೆ ಅವರಲ್ಲಿ ಸ್ವಂತಿಕೆ, ಸೃಜನಶೀಲತೆ, ಸ್ವಂತವಾಗಿ ಆಲೋಚಿಸುವ ಗುಣಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ಒತ್ತಡ, ಭಯ, ಉದ್ವೇಗ, ಚಂಚಲತೆಯನ್ನು ಹೋಗಲಾಡಿಸಿ ಸಂತೋಷದಿಂದ ಇರುವುದರ ಜತೆಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಿ ಜೀವನದಲ್ಲಿ ಕಷ್ಟವನ್ನು ಹೆದರಿಸುವ ಸಾಮಾನ್ಯ ಜ್ಞಾನವನ್ನು ತುಂಬಬೇಕು ಎಂದರು.

ನಾಗೇಶ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕೆ.ನಾಗೇಶ್ ಮಾತನಾಡಿ, ಭಾರತ ಹಳ್ಳಿಗಳ ದೇಶ ಇಂದಿನ ಮಕ್ಕಳಿಗೆ ಹಳ್ಳಿಗಳ ಪರಿಚಯವಾಗದ ಹೊರತು ದೇಶದ ಭವಿಷ್ಯ ಬದಲಾಗುವುದಿಲ್ಲ. ನಮ್ಮ ಅಸ್ತಿತ್ವ, ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳಬೇಕಾದ್ದರೆ ಬೇರೆಯವರ ಸೇವೆಯಲ್ಲಿ ಕಳೆದು ಹೋಗಬೇಕು ಎಂದು ತಿಳಿಸಿದರು.

ಗಾಂಧೀಜಿ ಹೇಳಿರುವಂತೆ ಸೇವೆಯನ್ನೇ ಗುರಿಯಾಗಿಸಿಕೊಂಡು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬನ್ನೀಸ್, ಕಬ್ಸ್ ಮತ್ತು ಬುಲ್‌ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಭಾಗಗಳಿದ್ದು, ಸದ್ಯದಲ್ಲೇ ರೇಂಜರ್ಸ್‌ ಆ್ಯಂಡ್ ರೋವರ್ಸ್‌ ಘಟಕವನ್ನು ಪ್ರಾರಂಭಿಸಲಾಗುವುದು ಎಂದರು.
ಸಂಸ್ಥೆಯ 26 ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಪ್ರಶಸ್ತಿ ಲಭಿಸಿದ್ದು, ಇದೇ ತಿಂಗಳ 29 ರಂದು ಬೆಂಗಳೂರಿನ ಗಾಜಿನಮನೆಯಲ್ಲಿ ರಾಜ್ಯಪಾಲ ವಿ.ಆರ್. ವಾಲಾರಿಂದ ಪ್ರಶಸ್ತಿ ಸ್ವೀಕರಿಸಲಿರುವ ಮಕ್ಕಳನ್ನು ಅಭಿನಂದಿಸಲಾಯಿತು.
ಆವರಣದಲ್ಲಿ ಮಕ್ಕಳಿಂದ ಬಿಡಾರಗಳನ್ನು ನಿರ್ಮಾಣ ಮಾಡಿ, ಕರಕುಶಲ ವಸ್ತುಗಳನ್ನು ತಯಾರು ಮಾಡುವುದರ ಜತೆಗೆ ಬಣ್ಣ ತುಂಬಿದ ರಂಗೋಲಿಯೊಂದಿಗೆ ಅವರಣದ ಅಂದವನ್ನು ಹೆಚ್ಚಿಸಲಾಗಿತ್ತು. ಶಿಬಿರಾಗ್ನಿಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಜಾನಪದ ನೃತ್ಯ ಪ್ರದರ್ಶನ ಏರ್ಪಡಿಲಾಗಿತ್ತು.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ತರಬೇತಿ ಆಯುಕ್ತೆ ಕಾಮೇಶ್ವರಿ ಭಟ್, ಜಂಟಿ ಕಾರ್ಯದರ್ಶಿ ಕಾಂಚನ ಮಾಲಾ, ತಾಲೂಕು ಕಾರ್ಯದರ್ಶಿ ಕೆ.ಭರತ್, ಖಜಾಂಚಿ ಎ.ಎಂ.ಜಯರಾಮ್, ಉಪಾಧ್ಯಕ್ಷೆ ಡಾ.ಭಾರತಿ ನಾಗೇಶ್, ಸಂಸ್ಥೆ ಡೀನ್ ಡಾ.ಸುಜಾ ಫಿಲಿಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net