

ಹಾಸನ: ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು, ವ್ಯಕ್ತಿತ್ವಕ್ಕೆ ವ್ಯಕ್ತಿಯನ್ನು ಗೆಲ್ಲುವ ಶಕ್ತಿ ಇರುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಬಿಡಾರದಹಳ್ಳಿ ಗ್ರಾಮದಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಪ್ರಜ್ಞೆ, ನಾಡುನುಡಿಯ ಬಗ್ಗೆ ಅಭಿಮಾನ ದೇಶಾಭಿಮಾನ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿ ದೆಸೆಯಲ್ಲೇ ಮನಸ್ಸಿನಲ್ಲಿ ಭದ್ರವಾಗಿ ಬೇರೂರಬೇಕು. ಇದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳಿಂದ ಸಾಧ್ಯ. ಶಿಕ್ಷಣಕ್ಕೆ ಪೂರಕವಾದ ಇಂತಹ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಬೂದೇಶ್ವರ ಮಠದ ಧರ್ಮದರ್ಶಿ ತಮ್ಮಣ್ಣಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆ ಕುರಿತು ಅರಿವು, ಶಾಂತಿಪಾಲನೆ, ಶಿಸ್ತು ಸಂಯಮ ಕಲಿಸುವ ಕಾರ್ಯಕ್ರಮ. ಉನ್ನತ ಶಿಕ್ಷಣದ ಜತೆ ವಿದ್ಯಾರ್ಥಿಗಳಿಗೆ ಉನ್ನತ ಚಿಂತನೆಯು ಮುಖ್ಯ. ಬೂದೇಶ್ವರ ಮಠ ಹಲವಾರು ವರ್ಷಗಳಿಂದ ಈ ಹಿಂದೆ ನಡೆದ ಎಲ್ಲ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದೆ. ಹಾಗೆಯೇ ಮುಂದೆಯೂ ನೀಡುತ್ತೇವೆ. ಬೂದೇಶ್ವರ ಮಠ ಎಂದಿಗೂ ಸೇವಾ ಯೋಜನೆಗಳಿಗೆ ತನ್ನ ಬೆಂಬಲವನ್ನು ನೀಡುತ್ತದೆ ಎಂದರು.
ಬೂದೇಶ್ವರ ಮಠದ ಮಾಜಿ ಧರ್ಮದರ್ಶಿ ಮೂರ್ತಣ್ಣ ಮಾತನಾಡಿ, ಗ್ರಾಮದಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಮೊಬೈಲ್‌ಗಳಿಂದ ವಿದ್ಯಾರ್ಥಿಗಳು ದೂರವಿದ್ದು ಗ್ರಾಮೀಣರಂತೆಯೇ ಬದುಕು ನಡೆಸಬೇಕು ಎಂದು ಕರೆ ನೀಡಿದರು.
ಹಾಸನ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಯೋಗೇಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ದೇಶಕ್ಕೆ ಮಹಾತ್ಮ ಗಾಂಧೀಜಿ ಅವರ ಅದ್ಭುತ ಕೊಡುಗೆ. ಅಂದು ಕೇವಲ 400 ಜನರಿಂದ ಪ್ರಾರಂಭವಾದ ಯೋಜನೆ ಇಂದು 40 ಕೋಟಿ ಸದಸ್ಯರನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಸೇವೆಯೇ ಪರಮಧರ್ಮ ಎಂದು ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಜಿ. ಕವಿತಾ ಮಾತನಾಡಿದರು. ಇದೇ ಸಂದರ್ಭ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರು, ನಿಟ್ಟೂರು ಗ್ರಾಮದ ಎಸ್.ಕೆ.ರಘುನಾಥ್, ವೆಂಕಟೇಶ್, ಭರತ್, ನಾಯಕ್, ಚಂದ್ರಶೇಖರ್, ನಟರಾಜ್, ಮಹಿಳಾ ಕಾಲೇಜಿನ ವ್ಯವಸ್ಥಾಪಕ ಹರ್ಷ, ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಇದ್ದರು.