

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕಾರ್ಪೋರೆಟ್ ವಲಯದಲ್ಲಿ ಉದ್ಯೋಗ ಅವಕಾಶ ಪಡೆಯಲು ಇದು ಉತ್ತಮ ವೇದಿಕೆಯಾಗಿದೆ. ಆದ್ದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೆಬ್ರಿ ತುಳಸಿ ಗ್ರೂಪ್ಸ್ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಉದ್ಯೋಗ ಮಾಹಿತಿ ಘಟಕ ಹಾಗೂ ಬೆಂಗಳೂರು ಉನ್ನತಿ ಫೌಂಡೇಶನ್ ಸಹಯೋಗದೊಂದಿಗೆ ಔದ್ಯೋಗಿಕ ಕೌಶಲಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್.ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಾಗಾರದ ಮೂಲಕ ಸ್ಪೋಕನ್ ಇಂಗ್ಲಿಷ್, ನಾಯಕತ್ವ ತರಬೇತಿ, ಸಂವಹನ ಕೌಶಲ ಹಾಗೂ ಸಂದರ್ಶನ ಎದುರಿಸುವ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ತರಬೇತಿ ನೀಡಲಾಗುವುದು ಎಂದರು.
ಉನ್ನತಿ ಫೌಂಡೇಶನ್‌ನ ತರಬೇತುದಾರೆ ರೇಷ್ಮಾ ಪೂಜಾರಿ, ಐಕ್ಯೂಎಸಿ ಸಂಚಾಲಕ ಡಾ.ಗಣೇಶ್ ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಸುಷ್ಮಾ ರಾವ್, ಉದ್ಯೋಗ ಮಾಹಿತಿ ಘಟಕದ ಸಂಚಾಲಕಿ ಡಾ.ಮೇವಿ ಮಿರಾಂಡ ಉಪಸ್ಥಿತರಿದ್ದರು. ಪವಿತ್ರಾ ನಿರೂಪಿಸಿದರು. ಅದಿತಿ ಸ್ವಾಗತಿಸಿದರು. ಶ್ರಾವಣಿ ವಂದಿಸಿದರು.