

ಕುಂದಾಪುರ: ಡಾ.ಕೋಟ ಶಿವರಾಮ ಕಾರಂತರು ಸಾಹಿತ್ಯ ರಚನೆ ಜತೆಗೆ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ವಿದ್ಯಾರ್ಥಿಗಳು ಅವರ ಕುರಿತು ಅಧ್ಯಯನ ನಡೆಸಿದರೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು.
ಉಡುಪಿ ಜಿಲ್ಲಾ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಮರವಂತೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಮಕ್ಕಳಿಗಾಗಿ ಕಾರಂತರು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಜನಾರ್ದನ ಮರವಂತೆ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‌ನ ಸಂಚಾಲಕ ಸದಸ್ಯೆ ಡಾ.ಭಾರತಿ ಮರವಂತೆ ಅವರು ಕಾರಂತರ ಪುಸ್ತಕಗಳಲ್ಲಿ ಬಳಕೆಯಾದ ರೇಖಾಚಿತ್ರಗಳ ರಂಗೋಲಿ ಬಿಡಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮುಖ್ಯಶಿಕ್ಷಕ ಎಂ.ಭಾಸ್ಕರ ಮಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತಾ, ಶಾಲಾ ರಜತೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್ ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ಸಂಚಾಲಕ ಡಾ.ಚೇತನ್ ಶೆಟ್ಟಿ ಕೊವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹಿತೇಶ ಶೆಟ್ಟಿ ವಂದಿಸಿದರು. ರಮೇಶ ನಾಯ್ಕ ಉಪ್ಪುಂದ ನಿರೂಪಿಸಿದರು.