ಪುಸ್ತಕಗಳ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ

14M.D.R.1
ಮದ್ದೂರು ತಾಲೂಕಿನ ನಂಬಿನಾಯಕನಹಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಗ್ರಾಪಂ ಅಧ್ಯಕ್ಷ ಸುರೇಶ್ ಉದ್ಘಾಟಿಸಿದರು. ನಂಜುಂಡಯ್ಯ, ಕೃಷ್ಣಯ್ಯ, ರಂಜಿತಾ, ಸತ್ಯಾವತಿ, ಪುಷ್ಪಾ, ಅನಿಲ್, ನಂದೀಶ್, ಕುಮಾರ್ ಇದ್ದರು.
Published on

ಮದ್ದೂರು: ಯುವ ಜನಾಂಗ ಹಾಗೂ ಸಾರ್ವಜನಿಕರು ಮೊಬೈಲ್ ಹಾಗೂ ದೂರದರ್ಶನಕ್ಕೆ ದಾಸರಾಗದೆ ಅತ್ಯುತ್ತಮ ಪುಸ್ತಕಗಳನ್ನು ಓದಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಕೊಪ್ಪ ಹೋಬಳಿಯ ನಂಬಿನಾಯಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಬಲವಾಡಿ ಗ್ರಾಪಂ ಹಾಗೂ ಜಿಪಂ ವತಿಯಿಂದ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ನಂಬಿನಾಯಕನಹಳ್ಳಿ ಗ್ರಾಮದ ಹಾಲು ಸಹಕಾರ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರು, ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಆಬಲವಾಡಿ ಗ್ರಾಪಂ ವ್ಯಾಪ್ತಿಯ ಆಬಲವಾಡಿಯಲ್ಲಿ ಈಗಾಗಲೇ ಡಿಜಿಟಲ್ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದ್ದು, ನಂಬಿನಾಯಕನಹಳ್ಳಿಯಲ್ಲಿ 2ನೇ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವೆಡೆ ಗ್ರಂಥಾಲಯ ಆರಂಭಿಸಲು ಕ್ರಮ ವಹಿಸಲಾಗುವುದು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುವ ಜತೆಗೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದರು.

ಡಿಜಿಟಲ್ ಗ್ರಂಥಾಲಯದಲ್ಲಿ ವಿಜ್ಞಾನ, ಸಮಾಜಕ್ಕೆ ಸಂಬಂಧಪಟ್ಟ ಹಾಗೂ ಸ್ವಾತಂತ್ರ್ಯ ಹೋರಾಟಗಾರರು, ಪ್ರಸಿದ್ಧ ಕವಿಗಳು ಬರೆದಿರುವ ಕಾದಂಬರಿ, ಕವನ ಸಂಕಲನ ಸೇರಿದಂತೆ ಹಲವು ಪುಸ್ತಕ ಸಿಗುತ್ತದೆ. ಇವುಗಳನ್ನು ಓದುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾನು ಗ್ರಾಪಂ ಅಧ್ಯಕ್ಷನಾದ ನಂತರ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗಳು, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪ್ರಸ್ತುತ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯವು ಅಪಾರ ಜನಪ್ರಿಯತೆ ಗಳಿಸಿದೆ. ಪಿಡಿಒ ನಂಜುಂಡಯ್ಯ, ಕಾರ್ಯದರ್ಶಿ ಕೃಷ್ಣಯ್ಯ, ಗ್ರಾಪಂ ಸದಸ್ಯರಾದ ರಂಜಿತಾ, ಸತ್ಯಾವತಿ, ಪುಷ್ಪಾ, ಮುಖಂಡರಾದ ಅನಿಲ್, ನಂದೀಶ್, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net