

ಕಲಬುರಗಿ: ವಿದ್ಯಾರ್ಥಿಗಳು ವಿದ್ಯೆ, ಬುದ್ಧಿ ಪಡೆಯುವ ಜತೆಗೆ ಪ್ರಜ್ಞಾವಂತರಾಗಿ ಬೆಳೆದಾಗ ಮಾತ್ರ ವ್ಯಕ್ತಿತ್ವ ವಿಕಸನವಾಗುತ್ತದೆ. ಮನಸ್ಸನ್ನು ಹತೋಟಿಲ್ಲಿಟ್ಟು ಸಾಧನೆ ಮಾಡಿದ ಸಮಾಜದ ಆಸ್ತಿಯಾಗಲು ಸಾಧ್ಯ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ ಹೇಳಿದರು.
ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಉಪಯೋಗಿಸಿಕೊಂಡು ಸಾಗಬೇಕು. ಶಿಸ್ತು, ಸಂಯಮ, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಇರಬೇಕು. ವೈಜ್ಞಾನಿಕ ಸತ್ಯ ನಂಬಬೇಕು ಎಂದರು.
ಮೊಬೈಲ್ ಬಳಕೆ ಹೆಚ್ಚಳದಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿ ಜ್ಞಾನ ಸಂಪಾದಿಸಬೇಕು. ಮನರಂಜನೆಯಲ್ಲಿ ತೊಡಗಿದಿರೆ ಜೀವನ ಕಷ್ಟದಿಂದ ದೂರಾಗುತ್ತದೆ. ನಕರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕವಾಗಿ ಯೋಚಿಸಬೇಕು ಎಂದರು.
ಏಕಾಗ್ರತೆಯಿಂದ ಓದಬೇಕು. ಉತ್ತಮ ಜ್ಞಾನ ಪಡೆಯಬೇಕು. ಬದುಕಿನಲ್ಲಿ ಜಾಗೃತಿಯಿಂದಿರಬೇಕು. ಜಂಕ್‌ಫುಡ್ ತಿನ್ನಬಾರದು. ಹಸಿ ತರಕಾರಿ ಮೊಳಕೆ ಕಾಳುಗಳಂತಹ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.
ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ದೆವ್ವ-ಭೂತ, ಭಾನಾಮತಿ, ವಾಮಾಚಾರ ನಂಬಬಾರದು. ಮೌಢ್ಯತೆ ಮೀರಿ ಕಷ್ಟಪಟ್ಟು ಓದಬೇಕು. ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು. ನಮ್ಮ ಶ್ರೇಷ್ಠ ಸಾಧಕರನ್ನು ಆದರ್ಶ ವ್ಯಕ್ತಿಗಳಾಗಿಸಿರಿಕೊಂಡು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಗುರಿ ಮುಟ್ಟುವ ಛಲ ಹೊಂದಬೇಕು ಎಂದರು.
ಸಂಸ್ಥೆ ಅಧ್ಯಕ್ಷೆ ಗೀತಾ ಪಾಟೀಲ್, ದೇವಕಿ ನಟರಾಜ, ರವೀಂದ್ರ ಶಾಬಾದಿ, ಶಿವರಂಜನ್ ಸತ್ಯಂಪೇಟ, ಸಂಸ್ಥೆ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕರಡ್ಡಿ ಪಾಟೀಲ್, ಪ್ರಾಚಾರ್ಯ ಎಂ.ಸಿ.ಕಿರೇದಳ್ಳಿ, ವಿನುತಾ ಆರ್.ಬಿ., ಪ್ರಶಾಂತ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು.