

ಹಳಿಯಾಳ: ಮಕ್ಕಳು ಪ್ರತಿನಿತ್ಯ ತಮ್ಮ ತಮ್ಮ ಮನೆಗಳಲ್ಲಿ ದಿನದಲ್ಲಿ 5 ನಿಮಿಷವಾದರೂ ಭಗವದ್ಗೀತೆಯ ಶ್ಲೋಕಗಳನ್ನು ಪಠಣ ಮಾಡಬೇಕು. ಇದರಿಂದ ಜ್ಞಾನ ವಿಕಾಸ ಹೊಂದುವುದರೊಂದಿಗೆ ವ್ಯಕ್ತಿತ್ವ ವಿಕಾಸಕ್ಕೆ ದಾರಿಯಾಗುತ್ತದೆ ಎಂದು ಪಟ್ಟಣದ ವಿ.ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಪ್ರಾಂಶುಪಾಲ ಬಸವರಾಜು ಎಚ್.ಎಂ. ತಿಳಿಸಿದರು.
ಇತ್ತೀಚೆಗೆ ವಿವಿಡಿ ಶಾಲೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ(ರಿ) ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಮದ್ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ಭಗವದ್ಗೀತಾ ಕಂಠಪಾಠದ 10ದಿನದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಗವದ್ಗೀತಾ ಅಭಿಯಾನ ಸಮಿತಿ ಹಳಿಯಾಳ ಸಂಚಾಲಕ ಮೋಹನ ಮರಾಠೆ ಮಾತನಾಡಿ, ತ್ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಭಗವದ್ಗೀತಾ ಅಭಿಯಾನ ನಡೆಸಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ ತಾಲೂಕಾ ಮಟ್ಟದ ಸ್ಪರ್ಧೆಗಳಿದ್ದು ವಿದ್ಯಾರ್ಥಿಗಳು ಭಾಗವಹಿಸುವಂತೆ ವಿನಂತಿಸಿದರು
ಶಾಲೆಯ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಶ್ರೀ ಮದ್ಭಗವದ್ಗೀತಾ ಕಂಠಪಾಠದ ತರಗತಿಗಳನ್ನು ಶಿಕ್ಷಕಿಯರಾದ ವಿದ್ಯಾ ಸ್ವಾದಿ ಮತ್ತು ಸಂಧ್ಯಾ ಹೆಗಡೆ ನಡೆಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭರತ ಸಂಸ್ಕೃತಿ ಪ್ರತಿಷ್ಠಾನದವರಿಂದ ಆಯೋಜಿಸಲಾದ ರಾಮಾಯಣ ಮತ್ತು ಮಹಾಭಾರತದ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ವಾಲ್ಮೀಕಿ, ಶಿಕ್ಷಕಿ ಗೀತಾ ವಿನಾಯಕ ಚವ್ಹಾಣ ಇದ್ದರು. ಶಿಕ್ಷಕ ಶ್ರೀಧರ ಬುಳ್ಳಣ್ಣವರ ಕಾರ್ಯಕ್ರಮ ನಿರ್ವಹಿಸಿದರು.