ವ್ಯಕ್ತಿತ್ವ ವಿಕಸನ ಕಲಿಕಾ ಸಾಮರ್ಥ್ಯ ಹೆಚ್ಚಳ

30 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ, ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಗುರಿ ಹೊಂದಬೇಕು. ನಿತ್ಯ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಪಠ್ಯಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಎಂಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾಣತನ, ಸೃಜನಾತ್ಮಕತೆ, ಉತ್ಸಾಹ ಮತ್ತು ಉತ್ತಮ ವ್ಯಕ್ತಿತ್ವದಿಂದ ಸಾಧನೆ ಸಾಧ್ಯ. ವ್ಯಕ್ತಿತ್ವ ವಿಕಸನದಿಂದ ಕಲಿಕಾ ಸಾಮರ್ಥ್ಯವೂ ಹೆಚ್ಚಲಿದೆ. ವಿದ್ಯಾರ್ಜನೆ ಮೇಲೆ ಪ್ರೀತಿ ಹಾಗೂ ಉತ್ಸಾಹವಿರಲಿ. ಕಾಲೇಜಿನಲ್ಲಿ ಪಠ್ಯದ ಜತೆಗೆ ಕೌಶಲಭಿವೃದ್ಧಿ, ಸೈಬರ್​ ಸೆಕ್ಯೂರಿಟಿ, ಕ್ಲೌಡ್​ ಕಂಪ್ಯೂಟಿಂಗ್​, ಮೊಬೈಲ್​ ಅಪ್ಲಿಕೇಶನ್​ ಡೆವೆಲಪ್​ಮೆಂಟ್​ ಹಾಗೂ ಇತರ ವಿಷಯಗಳ ತರಬೇತಿ ನೀಡಿ ಭವಿಷ್ಯ ರೂಪಿಸಲಾಗುವುದು. ಇದರಿಂದ ಉನ್ನತ ಉದ್ಯೋಗಾವಕಾಶಗಳು ದೊರೆಯಲಿವೆ. ಇವು ಸಾಧನೆ ಹಾದಿಯನ್ನು ಸುಲಭವಾಗಿಸಲಿವೆ ಎಂದರು.

ಕಾಲೇಜಿನ ನಿರ್ದೇಶಕ ಡಾ. ಸೂರಜ್​ ಜೈನ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಎಂ. ವಿಶ್ವೇಶ ಅವರು ವ್ಯಕ್ತಿತ್ವ ವಿಕಸನ, ಬಾಹ್ಯ ಹಾಗೂ ಆಂತರಿಕ ಕೌಶಲತೆ, ಸಮಯ ಪರಿಪಾಲನೆ, ಟೀಂ ವರ್ಕ್​, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಚಾರಗಳ ಕುರಿತು ಉಪನ್ಯಾಸ ನೀಡಿದರು.

ಆರ್​. ವಿ.ಚಿಟಗುಪ್ಪಿ, ಇತರರು ಇದ್ದರು. ಬಾಹುಬಲಿ ಚಿವಟೆ ನಿರೂಪಿಸಿದರು. ಮಂಜುನಾಥ ಪೂಜಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net