

ಉಪ್ಪಿನಬೆಟಗೇರಿ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಿಂದ ವ್ಯಕ್ತಿತ್ವ ವಿಕಸನದೊಂದಿಗೆ ಕೌಶಲ ವೃದ್ಧಿಯಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಎಫ್. ಮಾಳನವರ ಹೇಳಿದರು.
ಹಾರೋಬೆಳವಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಧಾರವಾಡ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಸ್ನಾತಕೋತ್ತರ ಅಧ್ಯಯನದವರು ಭಾನುವಾರದಿಂದ ಹಮ್ಮಿಕೊಂಡಿರುವ 7 ದಿನಗಳ ‘ನನ್ನ ಭಾರತಕ್ಕಾಗಿ ಯುವಕರು’ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ, ಒಗ್ಗಟ್ಟು, ಭ್ರಾತೃತ್ವ, ನಾಯಕತ್ವ ಗುಣ, ಗ್ರಾಮೀಣ ಅಭಿವೃದ್ಧಿ ಕಲಿಯಲು ಉತ್ತಮ ವೇದಿಕೆಯಾಗಿದೆ. ಸೇವಾ ಮನೋಭಾವ ಬೆಳೆಸಿಕೊಳ್ಳಲು ಇಂಥ ಶಿಬಿರಗಳು ವಿದ್ಯಾರ್ಥಿ ಜೀವನಕ್ಕೆ ಅವಶ್ಯಕತೆಯಿದೆ ಎಂದರು.
ಧಾರವಾಡ ತಾಲೂಕಿನ ಒಕ್ಕಲುತನ ಹಿಡುವಳಿ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಕನಾಜಿ ಮಾತನಾಡಿ, ಪಟ್ಟಣ ಪ್ರದೇಶದ ಜನರಿಗೆ ಹಳ್ಳಿಗಾಡಿನ ಜನರ ಜೀವನಶೈಲಿ ತಿಳಿದುಕೊಳ್ಳಲು ಈ ಶಿಬಿರ ಉಪಯುಕ್ತವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಪ್ರತಿ ವಿದ್ಯಾರ್ಥಿಯು ಗ್ರಾಮೀಣ ಭಾಗದವರಂತೆ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದರು.
ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಐ.ಎ. ಮುಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ಎಸ್ಎಸ್ ಅಧಿಕಾರಿ ಎನ್.ಬಿ. ನಾಲತವಾಡ, ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಕನಾಜಿ, ವೀರೇಶ ಕನಾಜಿ, ಇಸ್ಮಾಯಿಲ್ ಕೋಟೆಕಲ್, ಸುರೇಶ ಬರಸಿಕಟ್ಟೆ, ಉಲ್ಲಾಸ ದೊಡಮನಿ, ನಾಗರಾಜ ಗುಡಗನವರ, ಸಯ್ಯದ್ ತಾಜುನ್ನೀಸ್ ಸೇರಿ ವಿದ್ಯಾರ್ಥಿಗಳು, ಶಿಕ್ಷಕರು, ಉಪಸ್ಥಿತರಿದ್ದರು.