

ಮೈಸೂರು: ಮಾಜಿ ಮುಖ್ಯಮಂತ್ರಿ ವಿರುದ್ಧ ಹಗುರವಾಗಿ ಮಾತನಾಡುವ ಮುನ್ನ ಒಂದೊಮ್ಮೆ ಯೋಚಿಸುವುದು ಒಳಿತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಹೇಳಿದರು.
ಆರೋಗ್ಯ ಎಂಬುದು ಎಲ್ಲರಿಗೂ ಮುಖ್ಯವಾದದ್ದು. ಈ ವಿಚಾರದಲ್ಲಿ ಬಡವ-ಶ್ರೀಮಂತ ಎಂಬುದು ಇರುವುದಿಲ್ಲ. ಅಂತೆಯೇ ರಾಜಕೀಯವನ್ನು ರಾಜಕಾರಣ ರೀತಿಯಲ್ಲೇ ನೋಡಬೇಕು. ಅದನ್ನು ಬಿಟ್ಟು ವೈಯಕ್ತಿ ತೇಜೋವಧೆ ಮಾಡುವುದು ಸರಿಯಲ್ಲ. ಜತೆಗೆ ಇಂತಹ ಪ್ರವೃತ್ತಿಯನ್ನೂ ಯಾರೂ ರೂಢಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಪಕ್ಷವನ್ನು ತಾಯಿ ಎಂದುಕೊಂಡಿರುವ ಕುಮಾರಸ್ವಾಮಿ ಅವರು ಕಾರ್ಯಕರ್ತರು ಹಾಗೂ ಮುಖಂಡರ ಸಲುವಾಗಿ ಆರೋಗ್ಯ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಚೆನ್ನೈಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ವೈದ್ಯರ ಸಲಹೆ ಮೇರೆಗೆ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದಾರೆ. ಹೀಗಿರುವಾಗ ಶ್ರೀರಂಗಪಟ್ಟಣ ಶಾಸಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳಿಕೆ ನೀಡುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಒಂದು ಕಾಲದಲ್ಲಿ ಜೆಡಿಎಸ್ ಚಿಹ್ನೆಯಡಿ ಗೆದ್ದು ಶಾಸಕರಾಗಿ ಅಧಿಕಾರಿ ಅನುಭವಿಸಿದ್ದು ಇದೇ ಕುಮಾರಣ್ಣ ಹಾಗೂ ದೇವೇಗೌಡರಿಂದ ಎಂಬುದನ್ನು ಮರೆಯಬಾರದು. ರಾಜಕೀಯವಾಗಿ ಮೇಲೆ ಹೋಗಲು ಜೆಡಿಎಸ್ ಬಳಕೆ ಮಾಡಿಕೊಂಡು ಈಗ ಬೇರೆ ಪಕ್ಷಕ್ಕೆ ಹೋಗಿ ಟೀಕೆ ಮಾಡುವುದು ಎಷ್ಟು ಸರಿ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.
ಕುಮಾರಸ್ವಾಮಿ ಅವರ ಆಡಳಿತವನ್ನು ಪಕ್ಷಾತೀತವಾಗಿ ಎಲ್ಲರೂ ಮೆಚ್ಚಿದ್ದಾರೆ. ಎಂದಿಗೂ ಸ್ವಾರ್ಥಕ್ಕಾಗಿ ಕುಮಾರಣ್ಣ ರಾಜಕೀಯ ಮಾಡಿದವರಲ್ಲ. ಸಾಲ ಮನ್ನಾದಂತಹ ಕಾರ್ಯಕ್ರಮವನ್ನು ಜಾರಿ ಮಾಡಿದ್ದು ಇದೇ ನಾಯಕ ಎಂಬುದನ್ನು ಯಾರೂ ಮರೆಯಬಾರದು. ದೇವೇಗೌಡರ ಗರಡಿಯಲ್ಲಿ ಬೆಳೆದು ಅಧಿಕಾರ ಅನುಭವಿಸಿದ್ದನ್ನು ಒಮ್ಮೆ ನೆನೆಯಲಿ. ಅದನ್ನು ಬಿಟ್ಟು ಬಾಯಿ ಚಪಲಕ್ಕಾಗಿ ಮಾತನಾಡುವುದು ಬೇಡ ಎಂದು ಜರಿದಿದ್ದಾರೆ.