ಸತ್ಯದರ್ಶನ ಪ್ರತಿಭಟನೆಯಲ್ಲಿ ವೈಯಕ್ತಿಕ ಟೀಕೆ ಖಂಡನೀಯ

kodgi
Published on

ಕುಂದಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆದೇಶ ಹಾಗೂ ಆಡಳಿತದ ವಿರುದ್ಧ ಐದು ಅಂಶಗಳನ್ನಿಟ್ಟುಕೊಂಡು ಬಿಜೆಪಿ ವತಿಯಿಂದ ತಾಲೂಕಿನ ಎಲ್ಲ ಗ್ರಾಪಂ ಎದುರು ಏಕಕಾಲದಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನಾ ಸಪ್ತಾಹ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ವೈಯಕ್ತಿಕ ಟೀಕೆ ನಡೆಸುತ್ತಿದ್ದು, ವೈಯಕ್ತಿಕ ಟೀಕೆ ಮಾಡುವಾಗ ಜಾಗ್ರತೆ ವಹಿಸುವುದು ಉತ್ತಮ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೊಡ್ಗಿ, ಕಾಂಗ್ರೆಸ್ ಮುಖಂಡರು ಜನರ ಹಾಗೂ ಸಾರ್ವಜನಿಕರ ಹಾದಿ ತಪ್ಪಿಸುವ ಉದ್ದೇಶದಿಂದ ಶಾಸಕರು ಪ್ರಭಾವ ಬಳಸಿ 25 ಎಕರೆ ಗೇರು ಲೀಸ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಶಾಸಕ ದಿ.ಎ.ಜಿ.ಕೊಡ್ಗಿಯವರ ಐದು ಜನ ಮಕ್ಕಳು ಒಂದೇ ಒಂದು ಸೆಂಟ್ಸ್ ಗೇರು ಲೀಸ್ ಪಡೆದಿಲ್ಲ. ಈ ಬಗ್ಗೆ ಸೂಕ್ತ ದಾಖಲೆ ನೀಡಬೇಕು ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ನಿರ್ಲಕ್ಷ್ಯ ವಹಿಸುತ್ತಿದೆ. ಈ ಧೋರಣೆಯನ್ನು ಖಂಡಿಸಿ ಕರಾವಳಿಯ ಮೂರು ಜಿಲ್ಲೆಗಳ ಶಾಸಕರು ವಿಧಾನಸೌಧದ ಮುಂಭಾಗ ಹಾಗೂ ಸದನದ ಒಳಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net