

ಕಿಕ್ಕೇರಿ: ನೊಂದವರು, ದುರ್ಬಲರು, ನಿರಾಶ್ರಿತರಾದವರಿಗೆ ಕೈಲಾದಷ್ಟು ನೆರವು ನೀಡಿದರೆ ಮಾನಸಿಕ ತೃಪ್ತಿ ಸಿಗಲಿದೆ ಎಂದು ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.
ಸಮೀಪದ ಹೆಗ್ಗಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಮಳೆಗೆ ಐದು ಮನೆಗಳ ಛಾವಣಿ, ಗೋಡೆ ಕುಸಿದ ಪರಿಣಾಮ ನಿರಾಶ್ರಿತರಾಗಿದ್ದರು. ಈ ಕುರಿತು ಸಚಿತ್ರ ವರದಿ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು. ರೈತಾಪಿ ಕುಟುಂಬದವರು ಸಂಕಷ್ಟದಲ್ಲಿ ಸಿಲುಕಿರುವುದನ್ನು ತಿಳಿದು ಗ್ರಾಮಕ್ಕೆ ಆಗಮಿಸಿದ ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿ, ನನ್ನದು ಅಳಿಲು ಸೇವೆಯಾಗಿದೆ. ಸಂಕಷ್ಟದಲ್ಲಿರುವವರಿಗೆ ಆಪತ್‌ಕಾಲದಲ್ಲಿ ತ್ವರಿತವಾಗಿ ನೀಡುವ ನೆರವು ನೊಂದವರಿಗೆ ಬಹಳ ಅನುಕೂಲವಾಗಲಿದೆ ಎಂದರು.
ನಿರಾಶ್ರಿತರಾದ ನೇತ್ರಾವತಿ ಆನಂದ್, ಚಂದ್ರು ರೇಖಾ, ಪುಟ್ಟಲಕ್ಷ್ಮಮ್ಮ ರಂಗಸ್ವಾಮಿ, ರಾಣಿ ಮಹೇಶ್, ಜಯಮ್ಮ ಮಂಜೇಗೌಡರಿಗೆ ಆರ್ಥಿಕ ನೆರವು ನೀಡಿದರು.